ಬೆಂಗಳೂರು, ಜ. 30: ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಅನರ್ಹತೆ ಪ್ರಶ್ನಿಸಿ ಆಗಿನ 17 ಅನರ್ಹ ಶಾಸಕರುಗಳು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದರು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನ ಹೊರಡಿಸಿತ್ತು. ಆ ತೀರ್ಪಿನ ಇಂಚಿಂಚೂ ಮಾಹಿತಿಯನ್ನ ಹಿರಿಯ ವಕೀಲ ರವಿ. ಬಿ. ನಾಯಕ್ ಅವರು ತಿಳಿಸಿದ್ದಾರೆ. ತೀರ್ಪಿನ ಪ್ರಕಾರ ಉಪ ಚುನಾವಣೆಯಲ್ಲಿ ಸೋತವರೂ ಅನರ್ಹರೇ ಆಗುಳಿಯುತ್ತಾರೆ ಮತ್ತು ಅವರಿಗೆ ಯಾವುದೇ ಅಧಿಕಾರ ಕೊಡುವಂತಿಲ್ಲ.
ಸುಪ್ರೀಂ ತೀರ್ಪಿನ ಮಾಹಿತಿ ಬಗ್ಗೆ ಮಾತನಾಡಿದ ವಕೀಲ ರವಿ. ಬಿ. ನಾಯಕ್ ಅವರು ಹೇಳಿರುವಂತೆ.. “ರಾಜ್ಯದ 17 ಶಾಸಕರನ್ನು ಅನರ್ಹತೆ ಮಾಡಿದ ಸ್ಪೀಕರ್ ರಮೇಶ್ಕುಮಾರ್ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ”. ರಮೇಶ್ಕುಮಾರ್ ಆದೇಶದ ಪ್ರಕಾರ 15 ನೇ ವಿಧಾನಸಭೆಯ ಅವಧಿ 2018 ರಿಂದ 2023 ರವರೆಗೂ ಇದೆ. ಹೀಗಾಗಿ, 17 ಮಂದಿ ಕೂಡ ಅವಧಿಯವರೆಗೂ ಅನರ್ಹರೇ ಎಂದು ಕೋರ್ಟ್ ಹೇಳಿದೆ. ಅನರ್ಹ ಶಾಸಕರು ಉಪ- ಚುನಾವಣೆಯಲ್ಲಿ ಸ್ಫರ್ಧೆ ಮಾಡಬಹುದು, ಅವರೆಲ್ಲಾ ಮತ್ತೆ ಜನರಿಂದ ಜನಪ್ರತಿನಿಧಿಗಳಾಗಿ ಆಯ್ಕೆಯಾದ್ರೆ ಮಾತ್ರ ಅಧಿಕಾರ ಕೊಡಬಹುದು. ಅವರು ಜನರಿಂದ ಆಯ್ಕೆಯಾಗದೇ ಅವರಿಗೆ ಅಧಿಕಾರ ನೀಡುವಂತಿಲ್ಲ. ಅನರ್ಹ ಶಾಸಕರು ಅನರ್ಹರೇ.. ಹೀಗಾಗಿ, ಸದ್ಯ ಶಾಸಕರಾಗಿರುವವರಿಗೆ ಮಾತ್ರ ಅಧಿಕಾರ ನೀಡಲು ಬರುತ್ತದೆ. ಉಪ-ಚುನಾವಣೆಯಲ್ಲಿ ಪರಾಭವಗೊಂಡಿರುವ ಅನರ್ಹ ಶಾಸಕರಿಗೆ ಅಧಿಕಾರ ನೀಡಲು ಬರುವುದಿಲ್ಲ ಎಂದು ರವಿ.ಬಿ.ನಾಯಕ್ ಸ್ಪಷ್ಟನೆ ನೀಡಿದ್ದಾರೆ.