ಮೈಸೂರು: ಶಿಕ್ಷಣದಿಂದ ಮಾತ್ರ ನಮ್ಮ ಜ್ಞಾನದ ವಿಕಾಸವಾಗುತ್ತದೆ. ಅದರಿಂದ ನಾವು ಸ್ವತಂತ್ರ, ಸ್ವಾಭಿಮಾನಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.
ಅವರು ಇಂದು JSS ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಮೈಸೂರು ಇವರ ವತಿಯಿಂದ ಮೈಸೂರಿನ ವರುಣ ಕೆರೆಯ ಪಕ್ಕದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ನಗರದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ ಹಾಗೂ ಸಂಘದ ಕಚೇರಿ ಯನ್ನು ಉದ್ಘಾಟನೆ ಮಾಡಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜೆಎಸ್ಎಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸೇರಿ ಗೃಹ ನಿರ್ಮಾಣ ಸಂಘವನ್ನು ಸ್ಥಾಪಿಸಿದ್ದಾರೆ. ಸಂಘದ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡುವ ಕೆಲಸವನ್ನು ಮಾಡಿದ್ದಾರೆ. ಸಂಘವು ಹಿಂದೆ ಜಮೀನು ಕೊಂಡ ದರದಲ್ಲಿಯೇ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಸಹಕಾರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮ ಎಂದು ತಿಳಿಸಿದ ಮುಖ್ಯಮಂತ್ರಿಗಳು ಸಂಘದ ಸದಸ್ಯರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.
ಶಿವರಾತ್ರಿ ರಾಜೇಂದ್ರ ಮಠದ ಅಧ್ಯಕ್ಷರಾದ ನಂತರ ಸ್ವಾಮೀಜಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಕರ್ನಾಟಕ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಠದಲ್ಲಿಯೂ ಶಿಕ್ಷಣ ಕ್ಷೇತ್ರಗಳನ್ನು ಸ್ಥಾಪಿಸಿದ್ದಾರೆ. ಇದಕ್ಕೆ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಹಾಕಿದಾ ಅಡಿಪಾಯವೇ ಕಾರಣ. ಶಿಕ್ಷಣ ಬಹಳ ಮುಖ್ಯ ಎಂದರು. ಇದನ್ನೂ ಓದಿ: ಹೆದರಿಸುವ, ಬೆದರಿಸುವ ಪ್ರಯತ್ನಕ್ಕೆ ನಾನು ಜಗ್ಗಲ್ಲ: ಯತ್ನಾಳ್
ಮಹಿಳೆಯರಿಗೆ ಶಿಕ್ಷಣದ ಹಕ್ಕು ಸಿಕ್ಕಿದ್ದು ಬಸವಣ್ಣನವರ ಕಾಲದಲ್ಲಿ ನಮ್ಮ ಸಮಾಜ ಸಾಮಾಜಿಕ ಜಾತಿ ವ್ಯವಸ್ಥೆಯಿಂದ ಕೂಡಿದೆ. ಈ ಕಾರಣದಿಂದ ಬಸವಣ್ಣನವರ ಕಾಲಕ್ಕಿಂತಲೂ ಹಿಂದೆ ಶೂದ್ರ ಜನಾಂಗದವರು ಮತ್ತು ಮಹಿಳೆಯರು, ಶಿಕ್ಷಣದಿಂದ ವಂಚಿತರಾಗಿದ್ದರು. ಮಹಿಳೆಯರಿಗೆ ಶಿಕ್ಷಣದ ಹಕ್ಕು ಸಿಕ್ಕಿದ್ದು ಬಸವಣ್ಣನವರ ಕಾಲದಲ್ಲಿ ಎನ್ನುವುದನ್ನು ನಾವು ಮರೆಯಬಾರದು. ಅನುಭವ ಮಂಟಪ ಎಂದು ಹೆಸರಿಟ್ಟಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯ ಪಟ್ಟ ಮುಖ್ಯಮಂತ್ರಿಗಳು, ಅನುಭವ ಮಂಟಪ ಜಗತ್ತಿನ ಮೊದಲನೇ ಸಂಸತ್ತು ಎಂದು ಕರೆಸಿಕೊಂಡಿದೆ. ಈ ಸಂಸತ್ತಿನಲ್ಲಿ ಜಾತಿ, ಧರ್ಮಗಳು ಇರಲಿಲ್ಲ. ಎಲ್ಲಾ ಧರ್ಮದವರೂ ಇಲ್ಲಿನ ಸಂಸತ್ತಿನಲ್ಲಿ ಪಾಲ್ಗೊಳ್ಳುತ್ತಿದ್ದರು. ಬಸವಣ್ಣನವರು ಅದಕ್ಕಾಗಿಯೇ ಅನುಭವ ಮಂಟಪ ನಿರ್ಮಿಸಿ ಜನರ ಸಾಮಾಜಿಕ ಅನುಭವಗಳನ್ನು ಚರ್ಚೆ ಮಾಡಿ ಅದಕ್ಕೆ ರೂಪ ಕೊಡುವ ಕೆಲಸವನ್ನು ಮಾಡಿದ್ದರು ಎಂದರು.