ಕೋಲಾರ ಡಿ. 25: ಕ್ರಿಕೆಟ್ ಆಡುವ ವೇಳೆ ಆಟಗಾರರಿಬ್ಬರು ಪರಸ್ಪರ ಡಿಕ್ಕಿ ಹೊಡೆದುಕೊಂಡು ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ.
ತಾಲೂಕಿನ ಸೋಮಯಾಜನಪಲ್ಲಿ ಗ್ರಾಮದ ಬಳಿ ಧೋನಿ ಪ್ರೀಮಿಯರ್ ಲೀಗ್ ಎರಡು ದಿನದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಅದರಲ್ಲಿ ರೈಸಿಂಗ್ ಸ್ಟಾರ್ಸ್ ಮತ್ತು ಎಸ್‌ಎಎಸ್ ಕ್ರಿಕೆಟರ್ಸ್ ನಡುವೆ ಟೆನ್ನಿಸ್ ಬಾಲ್ ಮ್ಯಾಚ್ ನಡೆಯುತ್ತಿದ್ದು ಎಸ್‌ಎಎಸ್ ಕ್ರಿಕೆಟರ್ಸ್ ಬ್ಯಾಟಿಂಗ್ ಮಾಡುತ್ತಿತ್ತು. ಬ್ಯಾಟ್ಸ್ಮನ್ ಹೊಡೆದ ಶಾಟ್ಗೆ ರೈಸಿಂಗ್ ಸ್ಟಾರ್ಸ್ನ ಇಬ್ಬರು ಆಟಗಾರರಾದ ಬಾಲು ಮತ್ತು ಶ್ರೀನಿವಾಸ್ ಎಂಬುವರು ಇಬ್ಬರೂ ಬಾಲ್ನ್ನು ಕ್ಯಾಚ್ ಹಿಡಿಯಲು ಹೋದಾಗ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಇವರಿಬ್ಬರನ್ನೂ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.