ಬೆಳಗಾವಿ, ನ. 24 : ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆಯ ಪ್ರಚಾರ ಭರದಿಂದ ಸಾಗುತ್ತಿರುವ ಈ ಸಂದರ್ಭದಲ್ಲೇ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪ್ರಕಾಶ ಹುಕ್ಕೇರಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ. ಕಾಗವಾಡ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಕಾಶ ಹುಕ್ಕೇರಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಆತಂಕ ಉಂಟು ಮಾಡಿದೆ.
ತಮಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪ್ರಕಾಶ ಹುಕ್ಕೇರಿ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದಾರೆ. ಈ ಮಧ್ಯೆ ಅಚ್ಚರಿ ಎಂಬಂತೆ ರವಿವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಗಳನ್ನು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿರುವುದು ನಾನಾ ರೀತಿಯ ರಾಜಕೀಯ ಚಟುವಟಿಕೆಗಳಿಗೆ ಎಡೆಮಾಡಿಕೊಟ್ಟಿದೆ.