ಬೆಂಗಳೂರು, ಏ. 27, ನ್ಯೂಸ್ ಎಕ್ಸ್ ಪ್ರೆಸ್: ಅಧಿಕ ಪ್ರಮಾಣದ ಪೋಷಕಾಂಶಗಳನ್ನು ಒಳಗೊಂಡಿರುವ ತುಳಸಿಗೆ ಮೊಡವೆ ಹಾಗೂ ಇತರ ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಅದ್ಭುತ ಶಕ್ತಿಯಿದೆ. ತುಳಸಿಯಲ್ಲಿರುವ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣವು ಮೊಡವೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಇದು ನೈಸರ್ಗಿಕವಾಗಿ ಚರ್ಮವನ್ನು ಸ್ವಚ್ಛಗೊಳಿಸುವ ಕಾರಣ ಧೂಳು ಹಾಗೂ ಕಲ್ಮಶಗಳು ದೂರವಾಗುತ್ತದೆ.
ಇನ್ನು ಮುಖದ ಕಾಂತಿ ಹೆಚ್ಚಿಸುವ ಸಾಮರ್ಥ್ಯ ಕೂಡ ತುಳಸಿಗಿದೆ. ಸ್ವಲ್ಪ ತುಳಸಿ ಎಲೆಗಳನ್ನು ಜಜ್ಜಿ ರಸ ತೆಗೆದು ಅದಕ್ಕೆ ಸ್ವಲ್ಪ ಅರಿಶಿನ ಹಾಕಿ ಚೆನ್ನಾಗಿ ಕಲಸಬೇಕು. ಹೀಗೆ ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆದರೆ ಸಾಕು, ಮುಖದ ಕಾಂತಿ ಇಮ್ಮಡಿಗೊಳ್ಳುತ್ತದೆ.
ಸ್ವಲ್ಪ ತುಳಸಿ ಎಲೆಯ ರಸ ತೆಗೆದು ಅದಕ್ಕೆ ಒಂದು ಚಮಚ ಗ್ಲಿಸರಿನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಆ ಮಿಶ್ರಣದಿಂದ ಪ್ರತಿ ದಿನವೂ ಮುಖವನ್ನು ಮಸಾಜ್ ಮಾಡಿಕೊಳ್ಳಬೇಕು. ದಿನದಲ್ಲಿ ಎರಡರಿಂದ ಮೂರು ಸಲ ಹೀಗೆ ಮಾಡಿದರೆ ಸುಂದರ ತ್ವಚೆಯನ್ನು ನೀವು ಪಡೆಯಬಹುದು.
ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ಜಜ್ಜಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಬೇಕು. ಹೀಗೆ ತಯಾರಿಸಿದ ಪೇಸ್ಟ್ ಅನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಮಾಯವಾಗುತ್ತದೆ.
ತುಳಸಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಚರ್ಮಕ್ಕೆ ಉಂಟಾಗುವಂತಹ ಯಾವುದೇ ರೀತಿಯ ಸೋಂಕು ಬಾರದಂತೆ ಮಾಡುತ್ತದೆ. ಇದರೊಂದಿಗೆ ಚರ್ಮದಲ್ಲಿ ಉಂಟಾಗುವ ತುರಿ ಕಜ್ಜಿಯನ್ನು ಕೂಡ ಇದು ವಾಸಿ ಮಾಡುತ್ತದೆ.