ವಿಜಯಪುರ, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆ ಮುಗಿದ ನಂತರ ಸಮ್ಮಿಶ್ರ ಸರ್ಕಾರ ನೆಗೆದು ಬೀಳುತ್ತೆ ಎಂದು ಹೇಳಿದ್ದೆ ಹೊರತು ಮುಖ್ಯಮಂತ್ರಿ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ಅವರು, ಕೊಪ್ಪಳದಲ್ಲಿ ಚುನಾವಣೆ ಮುಗಿದ ನಂತರ ಸಿಎಂ ನೆಗೆದು ಬೀಳತ್ತಾರೆ ಎನ್ನುವ ಹೇಳಿಕೆಗೆ ಸ್ಪಷ್ಟನೆ ನೀಡಿದರು. ನಾನು ಯಾವ ರಾಜಕೀಯ ನಾಯಕರ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದಿಲ್ಲ. ನಾನು ಸಮ್ಮಿಶ್ರ ಸರ್ಕಾರ ನೆಗೆದು ಬೀಳುತ್ತೆ ಎಂದು ಹೇಳಿದ್ದೆ ಹೊರತು ಸಿಎಂ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಮಾತಿನ ಭರಾಟೆಯಲ್ಲಿ ಈಶ್ವರಪ್ಪ ಅವರು ಮಹಾತ್ಮ ಗಾಂಧೀಜಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿದರು. ಅಂದು ಗಾಂಧೀಜಿ ಅವರು ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಿ ಎಂದು ಹೇಳುತ್ತಿದ್ದರು. ಆದರೆ ನರೇಂದ್ರ ಮೋದಿ ಉಗ್ರರ ಕೆನ್ನೆಗೆ ಹೊಡೆಯುವ ಬದಲು ಅವರನ್ನು ಮುಗಿಸಿ ಬಿಡುತ್ತಿದ್ದಾರೆ ಎಂದರು. ಈ ಬಾರಿಯೂ ದೇಶದಲ್ಲಿ ಮೋದಿ ಹವಾ ಇದ್ದು, 300ಕ್ಕಿಂತ ಅಧಿಕ ಸೀಟು ಗಳಿಸಿ ಮತ್ತೊಮ್ಮೆ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಬರಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿಯೂ 20-25 ಸೀಟು ಬರಲಿದ್ದು, ದೇವೇಗೌಡ ಹಾಗೂ ಅವರ ಇಬ್ಬರು ಮೊಮ್ಮಕ್ಕಳು ಸೋಲು ಅನುಭವಿಸಲಿದ್ದಾರೆ ಎಂದರು.