ಬೆಂಗಳೂರು, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಕುಖ್ಯಾತ ರೌಡಿ ಲಕ್ಷ್ಮಣನನ್ನು ಇಂದು ಮಧ್ಯಾಹ್ನ ನಡುರಸ್ತೆಯಲ್ಲೇ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ನಗರ ಪಶ್ಚಿಮ ವಿಭಾಗದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ.
ಇಂದು ಮಧ್ಯಾಹ್ನ ಸುಮಾರು 1:10ರ ಸಮಯದಲ್ಲಿ ಇಸ್ಕಾನ್ ದೇವಾಲಯ-ಸೋಪ್ ಪ್ಯಾಕ್ಟರ್ ಮಾರ್ಗವಾಗಿ ಇನೋವಾ ಕಾರಿನಲ್ಲಿ ಲಕ್ಷ್ಮಣ್ ಹೋಗುತ್ತಿದ್ದಾಗ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿಕೊಂಡು ಓವರ್‍ಟೇಕ್ ಮಾಡಿ ಲಕ್ಷ್ಮಣ್ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಲಕ್ಷ್ಮಣ್‍ನನ್ನು ತಕ್ಷಣ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈತನ ವಿರುದ್ಧ ಕೊಲೆ, ಕೊಲೆಯತ್ನ, ದಮ್ಕಿ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಕೆಂಗೇರಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಲಕ್ಷ್ಮಣ್ ಇತ್ತೀಚೆಗೆ ಸಿಸಿಬಿ ಪೊಲೀಸರು ನಡೆಸಿದ್ದ ರೌಡಿ ಪರೇಡ್‍ಗೆ ಹಾಜರಾಗಿದ್ದನು.