ದೇವನಹಳ್ಳಿ, ಸೆ. 21: ಗುರು ಶಿಷ್ಯರ ಅನುಬಂಧ ಉತ್ತಮವಾದದ್ದು. ಗುರುಗಳನ್ನು ಶಿಕ್ಷಕರು ಸನ್ಮಾನಿಸುವ ಕಾರ್ಯ ಯಾರಿಗೂ ಸಿಗುವುದಿಲ್ಲ. ತಾವು ಹೇಳಿಕೊಟ್ಟ ಶಿಷ್ಯ ಈ ಮಟ್ಟದಲ್ಲಿ ಇದ್ದಾನೆ ಎಂದು ಅವರಿಗೆ ಸಂತಸವಾಗುತ್ತದೆ. ಗುರುಗಳ ಋಣ ತೀರಿಸಲು ಆಗುವುದಿಲ್ಲ. ಎಂದು ಕರ್ನಾಟಕ ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಅಭಿಯಂತರ ಎನ್ ನಾಗಣ್ಣ ತಿಳಿಸಿದರು.
ನಗರದ ಲಯನ್ಸ್ ಸೇವಾಭವನದಲ್ಲಿ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಲಯನ್ಸ್ ಸೇವಾ ಪ್ರತಿಷ್ಟಾನ ವತಿಯಿಂದ ಉಚಿತ ಕಣ್ಣಿನ ಪರಿಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ, ದಂತ ಚಿಕಿತ್ಸಾ ಶಿಬಿರ, ಹಾಗೂ ಇಂಜಿನಿಯರ್ಸ್ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜನ್ಮದಾತರಾದ ತಂದೆತಾಯಿಗಳು ಜೀವಕೊಟ್ಟರೆ ನಮಗೆ ಜೀವನದ ಮಾರ್ಗದರ್ಶನ ನೀಡುವುದು ಗುರುಗಳೇ ಆಗಿದ್ದಾರೆ. ತಂದೆ ತಾಯಿಗಳ ಆಶೀರ್ವಾದ ಮತ್ತು ಗುರುಗಳ ಮಾರ್ಗದರ್ಶನದಲ್ಲಿ ಸರಿಯಾಗಿ ನಡೆದ ವ್ಯಕ್ತಿ ಮಾತ್ರ ತನ್ನ ನಿಶ್ಚಿತ ಗುರಿ ಮುಟ್ಟಲು ಸಾಧ್ಯ.
ಆದ್ದರಿಂದ ನಾವುಗಳು ಮಾತಾಪಿತೃಗಳಿಗೆ ಸಮಾನವಾಗಿ ಗುರುದೇವೋಭವ ಎಂದು ಗೌರಸುತ್ತೇವೆ. ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರವಾದದ್ದು, ತಮ್ಮನ್ನು ಈ ಮಟ್ಟಕ್ಕೆ ತಂದ ಶಿಕ್ಷಕರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿ ಶಿಕ್ಷಕರಿಂದ ಸಾಕಷ್ಟು ಕಲಿತು ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ ತಾವು ಓದುವಾಗ ಶಿಕ್ಷಕರಾಗಿದ್ದ ನಾರಾಯಣಪ್ಪ ಮೇಷ್ಟ್ರುಕಲಿಸಿಕೊಟ್ಟ ಶಿಸ್ತನ್ನು ಇಂದಿಗೂ ಅಳವಡಿಸಿಕೊಂಡು ಹೋಗುತ್ತಿದ್ದೇನೆ ಪ್ರತಿ ಶಿಕ್ಷಕರಲ್ಲಿ ಕಾಯಕ, ನಿಷ್ಟೆಯನ್ನು ನೋಡುತ್ತಿದ್ದೇವೆ. ಪ್ರತಿಯೊಂದು ವಿಚಾರಗಳನ್ನು ಪರಿಣಾಮಕಾರಿಯಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಮಾಜಿ ಸಂಸದ ಸಿ ನಾರಾಯಣಸ್ವಾಮಿ ಮಾತನಾಡಿ, ವಿಧ್ಯೆ ನೀಡಿದ ಗುರುವನ್ನು ತಮ್ಮ ಜನ್ಮ ಇರುವ ತನಕ ಮರೆಯಬಾರದು. ಗುರುವಿನ ಮಹತ್ವವನ್ನು ತಿಳಿದುಕೊಳ್ಳಬೇಕು. ಇಂಜಿನಿಯರ್ ಗಳು ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಶಿಕ್ಷಕರು ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಮಾತನಾಡಿ, ಯಾವುದೇ ದೇಶ ಅಭಿವೃದ್ದಿ ಹೊಂದಬೇಕಾದರೆ ಶಿಕ್ಷಕರಿಂದ ಸಾಧ್ಯವಾಗಿದೆ. ಬದುಕಿನ ಉದ್ದಕ್ಕೂ ಬದ್ದತೆ, ಪ್ರಮಾಣಿಕತೆ ರೂಢಿಸಿಕೊಂಡಿದ್ದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಕೃಷಿ, ಕೈಗಾರಿಕೆ, ನೀರಾವರಿ, ಬ್ಯಾಂಕಿಂಗ್, ಹಾಗೂ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿ ವಿಶೇಷ ಚಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು.
ಲಯನ್ಸ್ ಅಧ್ಯಕ್ಷ ಶ್ರೀರಾಮಯ್ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗ್ರಾಮೀಣ ಜನರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲಾಗುತ್ತದೆ. ಸಂಘವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ತಿಂಗಳೂ ನಿರಂತರವಾಗಿ ಕಣ್ಣಿನ ಶಿಬಿರಗಳನ್ನು ಮಾಡಲಾಗುತ್ತಿದೆ. ಶಿಕ್ಷಕರನ್ನು ಸನ್ಮಾನಿಸಲಾಗಿದೆ. ಶಿಕ್ಷಣ ನೀಡಿದ ಗುರುಗಳನ್ನು ಯಾರೂ ಸಹ ಮರೆಯಬಾರದು ಎಂದರು.
ಈ ವೇಳೆಯಲ್ಲಿ ಹಾಪ್ ಕಾಮ್ಸ್ ಉಪಾಧ್ಯಕ್ಷ ಬಿ ಮುನೇಗೌಡ, ಡಿಸಿಫಾರ್ ಸೈಟ್ ಪ್ರಿಸರ್ವೇಷನ್ ನ ಸುನೀಲ್ ಕುಮಾರ್ ಕಿಂಸುರ, ಲಯನ್ಸ್ ಕಾರ್ಯದರ್ಶಿ ಜಯಪ್ರಕಾಶ್, ಲಯನ್ಸ್ ಮಾಜಿ ಅಧ್ಯಕ್ಷ ವೈ.ಸಿ.ಕೃಪಾಕರ್, ಸಿ.ಭಾಸ್ಕರ್, ಎಸ್ ಆರ್ ಎಸ್ ಸತೀಶ್, ವಿಜಯ್ ಕುಮಾರ್, ಇದ್ದರು.