ಬೆಂಗಳೂರು: ಗುರುಗ್ರಾಮದ
ಹೋಟೆಲ್ನಿಂದ ಬೇರೆ ಕಡೆಗೆ ಬಿಜೆಪಿ ಶಾಸಕರು ಸ್ಥಳಾಂತರವಾಗಿಲ್ಲ. ಎಲ್ಲರೂ ನಾಳೆ ರಾಜ್ಯಕ್ಕೆ
ಮರಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ಶಾಸಕರು ಬೇರೆ ಕಡೆ ಶಿಫ್ಟ್ ಆಗಿದ್ದಾರೆ ಎನ್ನುವುದು ಕೇವಲ ಊಹಾಪೋಹ. ಅವರೆಲ್ಲರೂ ಅದೇ ಹೋಟೆಲ್ನಲ್ಲಿದ್ದಾರೆ. ನಾಳೆ ಎಲ್ಲಾ ಶಾಸಕರು ಹಿಂದಿರುಗಲಿದ್ದಾರೆ ಎಂದು ತಿಳಿಸಿದರು.
ಸಿಎಲ್ಪಿ ಸಭೆಗೂ ನನಗೂ ಏನೂ ಸಂಬಂಧ ಇಲ್ಲ. ಅವರ ಶಾಸಕರು ಎಲ್ಲಾದರೂ ಹೋಗಿದ್ದರೆ ಅವರನ್ನು ಮರಳಿ ಕರೆದುಕೊಂಡು ಬರೋದು ಅವರ ಜವಾಬ್ದಾರಿ. ನಾವು 104 ಶಾಸಕರು ಒಟ್ಟಾಗಿ ಇರೋದು ನಮ್ಮ ಜವಬ್ದಾರಿ. ಕಾಂಗ್ರೆಸ್ – ಜೆಡಿಎಸ್ ಶಾಸಕರನ್ನು ಬಿಜೆಪಿ ಗೊಂದಲ ಮಾಡ್ತಿದೆ ಎನ್ನೋದು ಸತ್ಯಕ್ಕೆ ದೂರವಾದ ಮಾತು. ನಾವೇನೂ ಮಾಡುತ್ತಿಲ್ಲ. ಅನಗತ್ಯವಾಗಿ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. 20 ಲೋಕಸಭಾ ಸ್ಥಾನಗಳನ್ನು ಗೆಲ್ಲೋದು ನಮ್ಮ ಗುರಿಯಾಗಿದೆ. ಅದಕ್ಕೆ ಬೇಕಾದ ಪ್ರಯತ್ನ ಮಾಡ್ತಾ ಇದ್ದೇವೆ. ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಮೈತ್ರಿ ಸರ್ಕಾರದ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಯಾವ ಆಪರೇಷನ್ ಕಮಲವೂ ನಡೆಯುತ್ತಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.