ಭುವನೇಶ್ವರ, ಏ. 15, ನ್ಯೂಸ್ ಎಕ್ಸ್ ಪ್ರೆಸ್: ಸ್ಥಳೀಯ ಬಿಜೆಪಿ ನಾಯಕನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಓಡಿಶಾದ ಖುರ್ದಾ ಪಟ್ಟಣದಲ್ಲಿ ನಡೆದಿದೆ.
ಈ ಘಟನೆ ನಂತರ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಮಾಡಿದ್ದಾರೆ.
ಖುರ್ದಾ ವಲಯ-9ರ ಬಿಜೆಪಿ ಮಂಡಲ್ ಅಧ್ಯಕ್ಷ ಮಂಗೂಲಿ ಜೇನಾ ಹತ್ಯೆಯಾದ ಕೇಸರಿ ಪಕ್ಷದ ಸ್ಥಳೀಯ ನಾಯಕ ಎಂದು ಪೊಲೀಸರು ತಿಳಿಸಿದ್ದಾರೆ. ಮೋಟಾರ್ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಜೇನಾ ಅವರ ಮೇಲೆ 4 ಸುತ್ತು ಗುಂಡು ಹಾರಿಸಿ ಪರಾರಿಯಾದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಮುನ್ನವೇ ಅವರ ಪ್ರಾಣಬಿಟ್ಟಿದ್ದಾರೆ.
ಪೊಲೀಸರು ಹಂತಕರಿಗಾಗಿ ವ್ಯಾಪಕ ಬಲೆ ಬೀಸಿದ್ಧಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಜೇನಾ ಅವರ ಹತ್ಯೆಯಿಂದ ಕುಪಿತರಾದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆ ಪ್ರದೇಶದಲ್ಲಿ ಬೂದಿ ಮುಚ್ಚಿದ ಕೆಂಡದಂಥ ವಾತಾವರಣ ನೆಲೆಸಿದೆ.