ತಿಪಟೂರು:ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರಿಂದ ಟ್ವಿಟ್ಟರ್ ಅಭಿಯಾನವನ್ನು ಶಿಕ್ಷಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದು, ಈ ಮೂಲಕ ಸರ್ಕಾರಕ್ಕೆ ನಮ್ಮ ಸಮಸ್ಯೆಗಳ ಬಗ್ಗೆ ಗಮನವನ್ನು ಸೆಳೆಯಲು ಪ್ರಯತ್ನಿಸಲಾಗಿದೆ ಎಂದು ಸಂಘದ ಸಂಯೋಜಕ ಡಾ. ವೆಂಕಟೇಶ್ ಎಲ್. ಎಂ. ತಿಳಿಸಿದರು.
ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘವು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಸೇವಾಭದ್ರತೆಗಾಗಿ ಟ್ವಿಟ್ಟರ್ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದು ಸಾವಿರಾರು ಮಕ್ಕಳಿಗೆ ವಿಧ್ಯಾದಾನ ಮಾಡಿರುವ ನಮಗೆ ಆಳುವ ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಸುಮಾರು ೧೪೫೦೦ ಅತಿಥಿ ಉಪನ್ಯಾಸಕರ ಕುಟುಂಬಗಳು ಅತಂತ್ರಸ್ಥಿತಿಯಲ್ಲಿವೆ. ಮಾರ್ಚ್ ೧೮ ರಿಂದ ಇಲ್ಲಿಯವರೆವಿಗೂ ಸಾವಿರಾರು ಮನವಿಪತ್ರಗಳನ್ನು ಇಲಾಖೆಗೆ, ಮಂತ್ರಿಮಂಡಲಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ನೀಡಿದರೂ ಕವಡೆಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಈ ಮೂಲಕ ತಿಳಿಯಪಡಿಸುವುದೇನೆಂದರೆ ಸರ್ಕಾರ ಎಚ್ಚೆತ್ತು ಉಪನ್ಯಾಸಕರ ಗೋಳನ್ನು ಅರಿತು ಸಮಸ್ಯೆಯನ್ನು ಬಗೆಹರಿಸಬೇಕೆಂದರು.
ಸಂಘದ ಗೌರವಾಧ್ಯಕ್ಷ ಶಿವಣ್ಣ ಬಿ.ಸಿ. ಮಾತನಾಡಿ ನನಗೆ ಈಗಾಗಲೇ ವಯೋಮಿತಿ ಮೀರಿದೆ, ನಮ್ಮ ಮಕ್ಕಳ ಭವಿಷ್ಯ, ಕುಟುಂಭದ ಸ್ಥಿತಿ-ಗತಿಗಳು ಶೋಚನೀಯವಾಗಿದೆ. ಈಗಲಾದರು ಸರ್ಕಾರವು ತಿಳಿದುಕೊಂಡು ನಮ್ಮ ಸಮಸ್ಯೆಗೆ ಪರಿಹಾರವನ್ನು ಕೊಡಬೇಕೆಂದರು.
ಎಬಿವಿಪಿ ಹಿಂದಿನ ನಗರಾಧ್ಯಕ್ಷರಾದ ಡಾ. ಮೋಹನ್ ಮಾತನಾಡಿ ಸಂಬ್ರಮದಿಂದ ಆಚರಿಸಬೇಕಾದ ಶಿಕ್ಷಕರ ದಿನವನ್ನು ಈಗೆ ಪ್ರತಿಭಟಿಸುವ ಮೂಲಕ ಆಚರಿಸುತ್ತಿರುವುದು ಉಪನ್ಯಾಸಕರಿಗೆ ಮಾಡಿರುವ ಅವಮಾನದಂತಿದೆ. ದೇಶದಲ್ಲಿಯೇ ಆಚರಿಸುತ್ತಿರುವ ಈ ಶಿಕ್ಷಕ ದಿನಾಚರಣೆಯ ಸುಸಂದರ್ಭದಲ್ಲಿ ಶಿಕ್ಷಕರಿಗೆ ಉದ್ಯೋಗ ಭದ್ರತೆ ಮತ್ತು ಕೊಡಬೇಕಾದ ಸಂಬಳವನ್ನು ನೀಡಿ ಈ ದಿನಾಚರಣೆಗೆ ಅರ್ಥಬರುವ ಹಾಗೆ ಮಾಡಬೇಕೆಂದರು.
ಈ ಕಾರ್ಯಕ್ರಮದಲ್ಲಿ ಸಂಘದ ಜಂಟಿಕಾರ್ಯದರ್ಶಿ ಅರುಣ್‌ಕುಮಾರ್, ಕಾರ್ಯದರ್ಶಿ ಜ್ಯೋತಿ, ಸಹಕಾರ್ಯದರ್ಶಿ ಸಿದ್ದಲಿಂಗಮೂರ್ತಿ, ಖಜಾಂಚಿ ಮಹೇಶ್, ಹೇಮಲತ ಹಾಗೂ ಸದಸ್ಯರು, ಮತ್ತು ಕಲ್ಪತರು ರೈತ ಸಂಘದ ಜಿಲ್ಲಾಧ್ಯಕ್ಷ ಸ್ವಾಮಿ, ತಿಮ್ಲಾಪುರ ಇನ್ನೂ ಮೊದಲಾದವರಿದ್ದರು.