ನವದೆಹಲಿ, ಏ. 2, ನ್ಯೂಸ್ ಎಕ್ಸ್ ಪ್ರೆಸ್: 2019ರ ಆರ್ಥಿಕ ವರ್ಷದ ಮಾಸಿಕ ಜಿಎಸ್ಟಿ ಆದಾಯದ ಸರಾಸರಿ ಮೊತ್ತವು 98,114 ಕೋಟಿಯಷ್ಟಿದ್ದು, 2018ರ ಹಣಕಾಸು ವರ್ಷಕ್ಕಿಂತ ಶೇ 9.2ರಷ್ಟು ಅಧಿಕವಾಗಿದೆ. ವಿವಿಧ ಅಂಕಿ-ಅಂಶಗಳ ತರ್ಕಬದ್ಧತೆಯ ಕ್ರಮಗಳ ಹೊರತಾಗಿಯೂ ಇತ್ತೀಚಿನ ತಿಂಗಳುಗಳಲ್ಲಿ ಜಿಎಸ್ಟಿ ಆದಾಯದಲ್ಲಿ ಬೆಳವಣಿಗೆ ಕಾಣುತ್ತಿರುವುದು ಆಶಾದಾಯಕವಾಗಿದೆ. ಹಣಕಾಸು ವರ್ಷ ಕೊನೆಯ ತಿಂಗಳಾದ ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ದಾಖಲೆಯ ಮೊತ್ತದಲ್ಲಿ ಸರಕು ಮತ್ತು ಸೇವಾ ತೆರಿಗೆ ಹರಿದು ಬಂದಿದೆ. 2018ರ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 12.1ರಷ್ಟು ತೆರಿಗೆ ಬೊಕ್ಕಸಕ್ಕೆ ಬಂದಿದ್ದರೇ ಮಾರ್ಚ್ ತ್ರೈಮಾಸಿಕದಲ್ಲಿ ಶೇ 14.3ಕ್ಕೆ ಏರಿಕೆ ಆಗಿದೆ. ಮಾರ್ಚ್ ತಿಂಗಳಲ್ಲೇ ನೇರ, ವೈಯಕ್ತಿಕ ಹಾಗೂ ಸಾಂಸ್ಥಿಕ ತೆರಿಗೆ ಪಾಲು ಸೇರಿ ಒಟ್ಟು 1.06 ಲಕ್ಷ ಕೋಟಿ ತಲುಪಿದೆ. ಆದರೂ ಬಜೆಟ್ನಲ್ಲಿ ನಿರೀಕ್ಷಿತ ಉದ್ದೇಶ ತಲುಪುವಲ್ಲಿ ನೇರ ತೆರಿಗೆ ಸಂಗ್ರಹ ಪ್ರಮಾಣ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹಣಕಾಸು ಸಚಿವಾಲಯದ ಪ್ರಕಾರ, 2019ರ ಮಾರ್ಚ್ನಲ್ಲಿ ಜಿಎಸ್ಟಿ ಹರಿವಿನ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ (ಇಯರ್ ಆನ್ ಇಯರ್) ಶೇ 15.6ರಷ್ಟು ಆಗಿದೆ. ಹಾಗೆಯೇ, 2016ರ ಮಾರ್ಚ್ ತ್ರೈಮಾಸಿಕದಲ್ಲಿ ಶೇ 14.3ರಷ್ಟು ಹೆಚ್ಚಳವಾಗಿದೆ. ಮಾಸಿಕ ಏರಿಳಿತಗಳ ಹೊರತಾಗಿಯೂ 2018ರ ಆಗಸ್ಟ್ನಿಂದ ಜಿಎಸ್ಟಿ ಸಂಗ್ರಹಣೆ ಪ್ರವೃತ್ತಿ ಕ್ರಮೇಣ ಹೆಚ್ಚುತ್ತಿದೆ. 2019ರ ಆರ್ಥಿಕ ವರ್ಷದಲ್ಲಿ ಮಾಸಿಕ ಜಿಎಸ್ಟಿ ಸಂಗ್ರಹ ಮೊತ್ತ ಶೇ 9.2ರಷ್ಟು ಬೆಳವಣಿಗೆ ಕಾಣುತ್ತಿದೆ ಎಂದು ಇಂಡಿಯಾ ರೇಟಿಂಗ್ಸ್ ಮುಖ್ಯ ಎಕನಾಮಿಸ್ಟ್ ಡಿ.ಕೆ. ಪಂತ್ ಹೇಳಿದ್ದಾರೆ.