ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯ ತೆರಿಗೆದಾರರಿಗೆ ನಿನ್ನೆ ವಿಧಾನಸಭೆಯಲ್ಲಿ ಮಂಡನೆಯಾದ ಮತ್ತು ಅಂಗೀಕಾರವಾದ ಮಸೂದೆಯು ಶುಭ ಸುದ್ದಿ ನೀಡಿದೆ. ಏಕೆಂದರೆ ಆಸ್ತಿ ತೆರಿಗೆ ಮೇಲಿನ ದಂಡವನ್ನು ಶೇಕಡ 50ರಷ್ಟು ಕಡಿತಗೊಳಿಸುವ ಮಸೂದೆಯನ್ನು ಸರ್ಕಾರ ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಅಂಗೀಕರಿಸಿತು. ಈ ಮೂಲಕ ತೆರಿಗೆ ಅರ್ಧ ಕಡಿತ ಅಧಿಕೃತವಾಯಿತು.
ವಿಧಾನಸಭೆಯಲ್ಲಿ ಭೋಜನ ವಿರಾಮದ ನಂತರ ನಡೆದ ಕಲಾಪದಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ಹೊಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಈ ವಿಧೇಯಕದಿಂದ ಬೆಂಗಳೂರಿನ ನಾಗರಿಕರಿಗೆ ತೆರಿಗೆ ಬಾಬತ್ತು ದಂಡ ವಿನಾಯಿತಿ ಸೇರಿ ಸುಮಾರು ಇದು 2700 ಕೋಟಿ ರೂಪಾಯಿಯಷ್ಟು ಅನುಕೂಲವಾಗಲಿದೆ.
ಈ ವಿಧೇಯಕದಿಂದ ಬಡ ಹಾಗೂ ದುರ್ಬಲ ವರ್ಗದವರಿಗೆ ವಿಶೇಷ ವಿನಾಯತು ನೀಡಲಾಗಿದೆ. ಸರ್ಕಾರ ವಸತಿ ಯೋಜನೆಯ ಆಸ್ತಿಗಳು ಹಾಗೂ ಕೊಳಗೇರಿ ಪ್ರದೇಶದ ಕಟ್ಟಡಗಳಿಗೆ ಭರ್ತಿ ಮೇಲಿನ ದಂಡ ಇರುವುದಿಲ್ಲ ಒಂದು ಸಾವಿರ ಚದರ ಅಡಿ ಹೊರಗಿನ ಸ್ವಯಂ ಬಳಕೆ ಆಸ್ತಿದಾರರಿಗೆ ಸಂಪೂರ್ಣ ದಂಡ ವಿನಾಯಿತಿ ನೀಡಲಾಗಿದೆ.
ವಸತಿ ಮತ್ತು ಮಿಶ್ರ ಆಸ್ತಿದಾರರ ಬಾಕಿಯನ್ನು ಎಷ್ಟೇ ವರ್ಷದಿಂದ ಉಳಿಸಿಕೊಂಡರು ಇಂದಿನ ಐದು ವರ್ಷಕ್ಕೆ ಮಾತ್ರ ಲೆಕ್ಕಾಚಾರ ಹಾಕಲು ನಿರ್ಧರಿಸಲಾಗಿದೆ. ಇದೊಂದು ಜನಸ್ನೇಹಿ ತಿದ್ದುಪಡಿಯಾಗಿದ್ದು ಸರ್ಕಾರಕ್ಕೆ ನಷ್ಟವಾದರೂ ಪರವಾಗಿಲ್ಲ ಜನರಿಗೆ ಅನುಕೂಲವಾಗಲಿ ಎಂದು ಈ ಕಾನೂನು ಜಾರಿಗೆ ತರಲಾಗಿದೆ ಎಂದು ಡಿಕೆ ಶಿವಕುಮಾರ್ ಅವರು ಸದನದಲ್ಲಿ ತಿಳಿಸಿದರು.