ಬೆಂಗಳೂರು, ಮಾ, 23, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಕಾರಿಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ ಪ್ರಚಾರ ಮುಗಿಸಿ ಬರುವ ವೇಳೆಗೆ 10 ಜನರ ಗುಂಪೊಂದು ಗೋ ಬ್ಯಾಕ್ ನಿಖಿಲ್ ಘೋಷಣೆ ಕೂಗಿದ್ದು, ಕಾರಿನ ಮೇಲೆ ಕಲ್ಲು ತೂರಿದ್ದಾರೆ. ನಿಖಿಲ್ ಅವರು ಇದ್ದ ಕಾರಿನ ಮುಂದಿನ ಗಾಜಿಗೆ ಕಲ್ಲು ತಗುಲಿದ್ದು, ಗಾಜು ಒಡೆದಿದೆ. ಕಾರಿನ ಮುಂಬದಿಗೂ ಕಲ್ಲು ತಾಗಿ ಹಾನಿಯಾಗಿದೆ. ಕಲ್ಲು ತೂರಾಟ ನಡೆದಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿತ್ತು. ಕೆಎ.54.M. 1379ಸಂಖ್ಯೆಯ ಕಾರಿನ ಮೇಲೆ ಕಲ್ಲು ತೂರಾಟ ಆಗಿದ್ದು, ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ, ಇನ್ನುಳಿದವರಿಗಾಗಿ ಶೋಧ ನಡೆಯುತ್ತಿದೆ. ಸೋಮನಹಳ್ಳಿ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪ್ರಚಾರಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದಾರೆ ಎನ್ನಲಾಗಿದೆ. ಕೆಲವು ಕಡೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಕೇಳಿಬಂದಿದೆ.