ಲಕ್ನೋ: ಗಾಂಧಿ ಹುತಾತ್ಮರ ದಿನವಾದ ನಿನ್ನೆ ಉತ್ತರ ಪ್ರದೇಶದಲ್ಲಿ ಮಹಾತ್ಮ ಗಾಂಧಿ ಹತ್ಯೆ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಣೆ ಮಾಡಿದ ಹಿಂದೂ ಮಹಾಸಭಾ ನಾಯಕಿ ಸೇರಿದಂತೆ 13 ಕಿಡಿಗೇಡಿಗಳ
ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಹಾತ್ಮ ಗಾಂಧಿಯವರು ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆ ಮತ್ತು ತ್ಯಾಗವನ್ನು ಸ್ಮರಿಸಿ ಅವರು ಹತ್ಯೆಯಾದ ದಿನವನ್ನು ದೇಶದೆಲ್ಲೆಡೆ ಜ.30ರಂದು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ, ದೇಶ ವಿಭಜನೆ ಮತ್ತು ಪಾಕಿಸ್ತಾನದ ಹುಟ್ಟಿಗೆ ಗಾಂಧಿಯವರೇ ಕಾರಣ ಎಂದು ಆರೋಪಿಸುವ ಹಿಂದೂ ಮಹಾಸಭಾವು ಗಾಂಧಿ ಹತ್ಯೆಯಾದ ದಿನದಂದು ಸಂಭ್ರಮಾಚರಣೆ ಮಾಡುವ ಸಲುವಾಗಿ ಆಲಿಘಡ್ ನ ನೌರಂಗಬಾದ್ ಪ್ರದೇಶದಲ್ಲಿ ಗಾಂಧೀಜಿ ಪ್ರತಿಕೃತಿಗೆ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಗುಂಡಿಕ್ಕಿ ಕೊಲೆಗಡುಕ ನಾಥೂರಾಮ್ ಗೋಡ್ಸೆಗೆ ಜೈಕಾರ ಹಾಕಿದ್ದರು.
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ, ಹಲವರು ಕ್ರಮಕ್ಕೆ ಆಗ್ರಹಿಸಿದ್ದರು. ಬಳಿಕ ಎಚ್ಚೆತ್ತ ಪೊಲೀಸರು 13 ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳುವುದಾಗಿ ಆಲಿಘಡ್ ನ ಹಿರಿಯ ಪೋಲಿಸ್ ಅಧೀಕ್ಷಕ ಅಕ್ಷಯ್ ಕುಲ್ಹರೆ ಪಿಟಿಐಗೆ ತಿಳಿಸಿದ್ದಾರೆ.