ಗದಗ, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪಕ್ಷಾಂತರ ಪರ್ವ ಕೂಡ ಜೋರಾಗಿದೆ. ಗದಗದಲ್ಲಿ ಆಪರೇಷನ್ ಹಸ್ತ ಮಾಡುವ ಮೂಲಕ ಬಿಜೆಪಿಗೆ ಟಾಂಗ್ ನೀಡಲು ಕಾಂಗ್ರೆಸ್ ಮುಂದಾಗಿದೆ.
ನಿನ್ನೆ ರಾತ್ರಿ ಕಾಂಗ್ರೆಸ್ ನಾಯಕ ಹೆಚ್.ಕೆ ಪಾಟೀಲ್, ಮಾಜಿ ಶಾಸಕ ಹಾಗೂ ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಶ್ರೀಶೈಲಪ್ಪ ಬಿದರೂರ, ಗದಗ-ರೋಣ ಕ್ಷೇತ್ರದಲ್ಲಿ ಲಿಂಗಾಯತರ ಮತಗಳ ಮೇಲೆ ಹಿಡಿತ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದಕ್ಕೆ ಬಿದರೂರ ತಟಸ್ಥರಾಗಿ ಉಳಿದಿದ್ದರು. ಹೆಚ್.ಕೆ ಪಾಟೀಲ್ ಅವರನ್ನ ಭೇಟಿಯಾದಾಗ ಕಾಂಗ್ರೆಸ್ ಸೇರಲು ಒಲವು ತೋರಿಸಿದ್ದಾರೆ ಅಂತಾ ಹೇಳಲಾಗಿದೆ. ಈ ಹಿನ್ನೆಲೆ ಬಿಜೆಪಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.