ಅಮರಾವತಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಅಪರಾಧ ತನಿಖಾ ಇಲಾಖೆ ಇಂದು ಬಂಧಿಸಿದೆ. ಚಂದ್ರಬಾಬು ನಾಯ್ಡು ವಿರುದ್ಧ 371 ಕೋಟಿ ರೂ ಮೊತ್ತದ ಆಂಧ್ರಪ್ರದೇಶ ಕೌಶಲ ಅಭಿವೃದ್ಧಿ ಹಗರಣ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪವಿದೆ.
ಅನಂತಪುರ ಜಿಲ್ಲೆಯಲ ಕಿಯಾದಂತಹ ಕೈಗಾರಿಕೆಗಳ ಸಮೀಪದಲ್ಲಿ ಇರುವ ಶೈಕ್ಷಣಿಕ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಲು ಮತ್ತು ನಿರುದ್ಯೋಗಿ ಯುವಜನರಿಗೆ ತರಬೇತಿ ನೀಡುವ ಉದ್ದೇಶದಿಂದ 2014ರಲ್ಲಿ ಆಂಧ್ರ ಪ್ರದೇಶ ಕೌಶಲ ಅಭಿವೃದ್ಧಿ ನಿಗಮ ರಚಿಸುವುದಕ್ಕೆ ಸಂಬಂಧಿಸಿದಂತೆ ಹಗರಣ ನಡೆದ ಆರೋಪ ಕೇಳಿಬಂದಿತ್ತು.
ಆಂಧ್ರದ ನಂದ್ಯಾಲ ಪಟ್ಟಣದ ಆರ್‌ಕೆ ಫಂಕ್ಷನ್ ಹಾಲ್‌ನಲ್ಲಿ ಇದ್ದ ಚಂದ್ರಬಾಬು ನಾಯ್ಡು ಅವರನ್ನು ಮುಂಜಾನೆ 6 ಗಂಟೆಗೆ ಬಂಧಿಸಲಾಗಿದೆ. ಇದಕ್ಕೂ ಮುನ್ನ ನಾಯ್ಡು ಅವರಿಗೆ ನೋಟಿಸ್ ನೀಡಲಾಗಿತ್ತು. ಇದು ಜಾಮೀನು ರಹಿತ ಅಪರಾಧವಾಗಿದೆ ಎಂದು ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಧನಂಜಯುಡು ತಿಳಿಸಿದ್ದಾರೆ.
ಮಾಜಿ ಸಿಎಂ ನಾಯ್ಡು ಅವರನ್ನು ಅಪರಾಧ ಸಂಚು,ವಂಚನೆ ಹಾಗೂ ಆಸ್ತಿ ವಿತರಣೆಯಲ್ಲಿ ಅಪ್ರಾಮಾಣಿಕತೆ ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿ ಬಂಧಿಸಲಾಗಿದೆ.