ಬೆಂಗಳೂರು, ಅ. 14: ಕಡಿಮೆ ದರಕ್ಕೆ ವಿದೇಶಿ ಹಣ ವಿನಿಮಯ ಮಾಡಿಕೊಡುವುದಾಗಿ ನಂಬಿಸಿ ನಗದು ದೋಚುತ್ತಿದ್ದ ಎಂಟು ಅಂತಾರಾಜ್ಯ ವಂಚಕರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮೊಹಮದ್ ಶಕೀಲ್ ಶೇಕ್ (19) ದೆಹಲಿಯ ಶಾಫಿಯಾ ಬೇಗಂ (35) ಹಾಗೂ ಉತ್ತರ ಪ್ರದೇಶ ರಹೀಂ ಖುರೇಶ್ (24) ಮಹಮದ್ ದಿಲ್ವರ್ ಹುಸೇನ್(39) ಮೊಹಮದ್ ಶನಾವಾಜ್, ಮೊಹಮದ್ ಇಬ್ರಾಹಿಂ, ರಹೀಂ ಶೇಕ್ ಹಾಗೂ ಅನ್ವರ್ ಹುಸೇನ್ ಬಂಧಿತರು. ಅವರಿಂದ ಪೊಲೀಸರು 3.50 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ನಗರದಲ್ಲಿ ವಾಸವಿದ್ದರು. ಇತ್ತೀಚೆಗೆ ಸೈಯದ್ ಖಲೀಫ್ ಉಲ್ಲಾ ಎಂಬುವವರಿಗೆ ಸೌದಿ ಅರೇಬಿಯಾದ ಕರೆನ್ಸಿಯನ್ನು ಕಡಿಮೆ ಮೊತ್ತಕ್ಕೆ ವಿನಿಯಮ ಮಾಡಿಕೊಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ್ದ ಸೈಯದ್ ತನ್ನ ಬಳಿ ಇದ್ದ 3.50 ಲಕ್ಷ ರೂಪಾಯಿ ಜೊತೆ ಜಯನಗರ 5ನೇ ಬ್ಲಾಕ್‌ಗೆ ತೆರಳಿದ್ದ ಮೂವರು ಸೇರಿಕೊಂಡು ಸೈಯದ್ ಬಳಿ ಇದ್ದ 3.50 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದರು. ಸೈಯದ್ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.