ಗದಗ, ಡಿ. 21 : ಕೆರೆ ಬರೀ ನೀರು ತುಂಬಿಕೊಂಡಿಲ್ಲ. ಬದಲಾಗಿ ಆಕಾಶದತ್ತರಕ್ಕೆ ಹಾರೋ ಬಾನಾಡಿಗಳ ಲೋಕವನ್ನೇ ತನ್ನ ಮಡಿಲಿಗೆ ಹಾಕಿಕೊಂಡಿದೆ. ಸಹಸ್ರಾರು ವಲಸೆ ಪಕ್ಷಿಗಳಿಗೆ ತೂಗೋ ತೊಟ್ಟಿಲಾಗೋ ಮೂಲಕ ಆಶ್ರಯ ತಾಣವಾಗಿದೆ. ಅಂತಹ ಸೌಂದರ್ಯದ ತಾಣವನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು.
ಈ ಬಾನಾಡಿಗಳ ಮನಮೋಹಕ ದೃಶ್ಯಗಳು ಕಂಡು ಬರೋದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ. ನೇಸರನ ಆಗಮನದ ಬೆನ್ನಲ್ಲೇ ವಿಶಾಲ ಕೆರೆಯ ಸುತ್ತ ಮುತ್ತ ವಿದೇಶಿ ಹಕ್ಕಿಗಳ ಕಲರವ ಸಂಭ್ರಮ ಹೇಳತೀರದು. ಬೆಳಿಗ್ಗೆಯಿಂದ ಸಂಜೆಯವರೆಗೂ ಈ ವಲಸೆ ಪಕ್ಷಿಗಳ ಸಾಮ್ರಾಜ್ಯ ಎಂಥವರನ್ನು ಬೆರಗು ಮೂಡಿಸುತ್ತಿದೆ.
ಗದಗದಿಂದ ಬೆಂಗಳೂರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಲಕ್ಷ್ಮೇಶ್ವರದಿಂದ 12 ಕಿಲೋ ಮೀಟರ್ ಅಂತರದಲ್ಲಿ 138 ಎಕರೆ ವಿಸ್ತಾರದ ಈ ಕೆರೆಯಲ್ಲಿ ಕಳೆದ 15 ವರ್ಷಗಳಿಂದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಸೈಬೇರಿಯಾ, ಮಲೇಷಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಲಢಾಕ, ಟಿಬೆಟ್ ಗಳಿಂದ ಸಹಸ್ರಾರು ಪಕ್ಷಿಗಳು ಬರುತ್ತಿವೆ. ಇವುಗಳ ಕಲರವ ಪ್ರತಿವರ್ಷ ಕೆರೆಗೆ ರಂಗು ತರುತ್ತಿದೆ. ಜೊತೆಗೆ ಈ ಪಕ್ಷಿಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದೆ.