ನೆಲಮಂಗಲ, ಆ. 28: ಶಿಕ್ಷಣಕ್ಷೇತ್ರದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರೀಕ್ಷೆಗಳಲ್ಲಿ ಗುಣಾತ್ಮಕತೆ ಹೆಚ್ಚಾಗಲು ತರಬೇತಿಕಾರ್ಯಗಾರ ಸಹಕಾರಿ ಎಂದು ಶಿಕ್ಷಣ ಇಲಾಖೆಯ ಜಿಲ್ಲಾಉಪನಿರ್ದೇಶಕ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಥಾಮಸ್ ಮೆಮೋರಿಯಲ್ ಶಾಲೆಯ ಸಭಾಂಗಣದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಯರು ಮತ್ತು ಉಪ ಪ್ರಾಂಶುಪಾಲರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರಶ್ನೆಪತ್ರಿಕೆ ತಯಾರಿಕಾಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಭಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ ಬೆಂಗಳೂರು ಗ್ರಾ.ಜಿಲ್ಲೆ ಮೂರನೇ ಸ್ಥಾನ ಪಡೆದುಕೊಳ್ಳಲು ಶಿಕ್ಷಕರ ಪರಿಶ್ರಮ ಬಹಳಷ್ಟಿದೆ, ಇನ್ನೂ ಹೆಚ್ಚಿನ ಗುಣಮಟ್ಟದ ಮೂಲಕ ಮುಂದಿನ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆಯುವಂತೆ ಮಕ್ಕಳನ್ನು ತಯಾರು ಮಾಡಬೇಕಾಗಿರುವುದು ನಮ್ಮ ಹೊಣೆ. ವಿದ್ಯಾರ್ಥಿಗಳು ಎದುರಿಸುವ ಪರೀಕ್ಷೆಗಳಲ್ಲಿ ಗುಣಾತ್ಮಕತೆ ಮೂಡಿಸಲು ಪ್ರಶ್ನೆಪತ್ರಿಕೆಗಳ ತಯಾರಿಕೆಯ ಬಗ್ಗೆ ಕಾರ್ಯಗಾರ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳು ಶಾಲೆಯ ಪಠ್ಯಪುಸ್ತಕದ ಜೊತೆ ಕಲಿತ ಶಿಕ್ಷಣದ ಆಧಾರದಲ್ಲಿ ಪರೀಕ್ಷೆಗಳು ಎದುರಾದರೆ ವಿದ್ಯಾರ್ಥಿಗಳ ಶ್ರಮ ಸಫಲವಾಗುತ್ತದೆ. ಅದಕ್ಕೆ ಪೂರಕವಾಗಿ ಕಾರ್ಯಗಾರ ಸಹಕಾರಿಯಾಗಿದೆಎಂದರು.
ಪ್ರೌಢಶಾಲಾ ಮುಖ್ಯೋಪಾಧ್ಯಯರು ಮತ್ತು ಉಪ ಪ್ರಾಂಶುಪಾಲರ ಸಂಘದ ಜಿಲ್ಲಾಪ್ರಧಾನ ಕಾರ್ಯದರ್ಶಿ ರವಿಕುಮಾರ್ ಟಿ.ಕೆ ಮಾತನಾಡಿ, ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆ ಸಾಧಿಸಲು ನಿರಂತರವಾಗಿ ಶಿಕ್ಷಕರು ಶ್ರಮಪಡುತ್ತಿದ್ದಾರೆ. ಅದೇರೀತಿ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆ ಪತ್ರಿಕೆಯಲ್ಲಿ ಗುಣಾತ್ಮಕತೆ ಮೂಡಿರಬೇಕು. ಆ ಉದ್ದೇಶದಿಂದ ಪೂರ್ವಸಿದ್ದತಾ ಪರೀಕ್ಷೆಗಳ ಪ್ರಶ್ನೆಪತ್ರಿಕೆಯನ್ನುತಯಾರಿಸಲು ಕಾರ್ಯಗಾರವನ್ನುಆಯೋಜಿಸಲಾಗಿದೆಎಂದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಯರು ಮತ್ತು ಉಪ ಪ್ರಾಂಶುಪಾಲರ ಸಂಘ ಜಿಲ್ಲಾಅಧ್ಯಕ್ಷ ಕೃಷ್ಣಮೂರ್ತಿ ವೈ.ಎಮ್, ಖಜಾಂಚಿಎನ್.ರಾಜರೆಡ್ಡಿ, ನಿರ್ದೇಶಕ ಶಂಕರಪ್ಪ, ಚಂದ್ರಶೇಖರ್, ತಾಲೂಕು ಅಧ್ಯಕ್ಷತಮ್ಮಯ್ಯ, ವಿಷಯ ಪರಿವೀಕ್ಷಕ ಶ್ರೀನಿವಾಸ್, ಥಾಮಸ್ ಶಾಲೆಯ ಶಿಕ್ಷಕರಾದ ಹರ್ಷವರ್ಧನ್, ಪ್ರಭಾವತಿ, ಮೋಹನ್, ಪೂರ್ಣಿಮಾ ಮತ್ತಿತರರಿದ್ದರು.