ಬೆಂಗಳೂರು: ಸರಿಸುಮಾರು 25 ವರ್ಷದ ಹಿಂದೆ ತೆರೆಕಂಡ ಉಪೇಂದ್ರ ಸಿನಿಮಾದ “ಏನಿಲ್ಲ ಏನಿಲ್ಲ ಹಾಡಿನ ಕರಿಮಣಿ ಮಾಲೀಕ ನೀನಲ್ಲ” ಹಾಡು ಸೋಷಿಯಲ್ ಮೀಡಿಯಾದಲ್ಲಿ ಕಳೆದ ಹಲವು ದಿನಗಳಿಂದ ಎಬ್ಬಿಸಿದ ಹವಾ ಎಲ್ಲರಿಗೂ ಗೊತ್ತು. ಸೋಷಿಯಲ್ ಮೀಡಿಯಾದಲ್ಲಿ “ಓ ನಲ್ಲ ಕರಿಮಣಿ ಮಾಲೀಕ ನೀನಲ್ಲ” ಹಾಡಿನ ಹವಾ ಇನ್ನೂ ಮುಗಿದಿಲ್ಲ. ಈಗ ನಮ್ಮ ಮೆಟ್ರೋದಲ್ಲೂ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ಯುವಕರು ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ.
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯುವಕರು ರೀಲ್ಸ್ ಮಾಡಿ ಹುಚ್ಚಾಟ ಮೆರೆದ ಘಟನೆ ಬೆಳಕಿಗೆ ಬಂದಿದೆ. ನಮ್ಮ ಮೆಟ್ರೋ ರೈಲಿನಲ್ಲಿ ಪುಂಡರು ಮೊಂಡಾಟ ಮೆರೆದಿದ್ದು, ಕರಿಮಣಿ ಮಾಲೀಕ ನೀನಲ್ಲ…ಎಂಬ ಹಾಡಿಗೆ ರೀಲ್ಸ್ ಮಾಡಿ..ಕೂಗಾಟ ನಡೆಸಿ ಹುಚ್ಚಾಟ ಮೆರೆದಿದ್ದಾರೆ. ಇದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಯಮದ ಪ್ರಕಾರ ನಮ್ಮ ಮೆಟ್ರೋದಲ್ಲಿ ರೀಲ್ಸ್ ಮಾಡುವ ಹಾಗಿಲ್ಲ, ನಿಯಮ ಉಲ್ಲಂಘಿಸಿ ಮೊಂಡಾಟ ಮೆರೆದ ಯುವಕರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ಯುವಕರು ರೀಲ್ಸ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ಬಿಎಂಆರ್ ಸಿ ಎಲ್ ಯನ್ನು ಟ್ಯಾಗ್ ಮಾಡಿ ಪ್ರಯಾಣಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.