ಬೆಂಗಳೂರು, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್ : ಬಿಸಿಲ ಬೇಗೆಯಿಂದ ಕರ್ನಾಟಕದ ಹಲವು ಪ್ರದೇಶಗಳು ತತ್ತರಿಸಿದ್ದು, ಸದ್ಯ ಕೆಲವೆಡೆ ಮಳೆ ಸುರಿಯುತ್ತಿದೆ. ಇದೀಗ ಭಾರೀ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಕೆಲವಡೆ ಮುಂದಿನ ಎರಡು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮುಖ್ಯವಾಗಿ ಬೆಂಗಳೂರು ನಗರ, ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಹಾಗೂ ರಾಮನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ. ಇದರಿಂದ ಉಷ್ಣಾಂಶದ ಪ್ರಮಾಣ ವಾಡಿಕೆಗಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿ ಬೀಸಿಗಾಳಿ ಬೀಸುತ್ತಿದೆ. ಇನ್ನು ಎರಡು ಮೂರು ದಿನ ಇದೇ ವಾತಾವರಣ ಮುಂದುವರೆಯಲಿದ್ದು, ರಾಜ್ಯಕ್ಕೆ ಮುಂಗಾರು ಪ್ರವೇಶದ ಬಳಿಕ ಉಷ್ಣಾಂಶದಲ್ಲಿ ಇಳಿಕೆಯಾಗಲಿದೆ. ಉತ್ತರ ಒಳನಾಡಿನ ಕೆಲವೆಡೆಯೂ ಗುಡುಗು, ಆಲಿಕಲ್ಲು, ಗಾಳಿ ಸಹಿತ ಮಳೆಯಾಗಲಿದೆ ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.