ಬೆಂಗಳೂರು:
ಬಜೆಟ್ ಕಳೆದಬಾರಿಗಿಂತ
ಗಾತ್ರದಲ್ಲಿ ದೊಡ್ಡದಾಗಿ ಕಾಣುತ್ತಿದೆ. ಆದರೆ ಶಿಕ್ಷಣ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಲಕ್ಷಿಸಲಾಗಿದೆ. ಕಳೆದ ಬಾರಿ ಶಿಕ್ಷಣಕ್ಕೆ 11.68 ರಷ್ಟು ಹಣ ಮೀಸಲಿಟ್ಟಿದ್ದರು. ಈ ಬಾರಿ ಕೇವಲ ಶೇ.11ನಷ್ಟು ಮೀಸಲಿಟ್ಟಿದ್ದಾರೆ. ಆ ಮೂಲಕ ಶೇ. 0.68ಹಣ ಕಡಿತ ಮಾಡುವ ಮೂಲಕ ಕುಮಾರಸ್ವಾಮಿ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯನ್ನು ಮುಂದುವರೆಸಿದೆ.
ಎಂದು ಎಸ್ಎಫ್ಐ ರಾಜ್ಯ
ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಪಕ್ಕದ ಕೇರಳ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಶೇ.28ರಷ್ಟು
ಮೀಸಲಿಟ್ಟಿದೆ. ಆದ್ದರಿಂದ ಅಲ್ಲಿ ದೇಶದಲ್ಲಿಯೇ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಿದೆ. ಶಿಕ್ಷಣ
ತಜ್ಞ “ಕೋಥಾರಿ ಆಯೋಗ”ದ ಪ್ರಕಾರ ರಾಜ್ಯ ಬಜೆಟ್ ನಲ್ಲಿ ಶಿಕ್ಷಣಕ್ಕೆ ಶೇ.30ರಷ್ಟು ಹಣ
ಮೀಸಲಿಟ್ಟಾಗ ಮಾತ್ರ ಶಿಕ್ಷಣ ಕ್ಷೇತ್ರದ ಕೊರತೆಗಳನ್ನು ನೀಗಿಸಿ, ಉತ್ತಮ ಗುಣಮಟ್ಟದ ಶಿಕ್ಷಣ
ನೀಡಲು ಸಾಧ್ಯವೆಂದು ಹೇಳಿದೆ. ಬಜೆಟ್ನಲ್ಲಿ ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈ
ಮೂಲಕ ಅವೈಜ್ಞಾನಿಕ ಬಜೆಟ್ ನ್ನು ಸಿಎಂ ಕುಮಾರಸ್ವಾಮಿ ಮಂಡಿಸಿದ್ದಾರೆ ಎಂದು ಎಸ್ಎಫ್ಐ
ಆರೋಪಿಸಿದೆ.
ಉಚಿತ
ಬಸ್ ಬರವಸೆ ಹುಸಿ:
ವಿದ್ಯಾರ್ಥಿಗಳಿಗೆ ಉಚಿತಬಸ್ ಪಾಸ್ ನೀಡುವುದಾಗಿ ಹೇಳಿದ್ದ ಸರಕಾರ, ಬಜೆಟ್ ನಲ್ಲಿ ಆ ಬಗ್ಗೆ ಪ್ರಸ್ಥಾಪವನ್ನು
ಮಾಡದೆ ದ್ರೋಹ ಎಸಗಿದೆ. ರಾಜ್ಯದಲ್ಲಿ 55 ಸಾವಿರಕ್ಕೂ ಹೆಚ್ಚು ಶಾಲೆಗಳು ಮೂಲ ಸೌಲಭ್ಯವಿಲ್ಲದೆ ನರಳುತ್ತಿವೆ. ಅವುಗಳಿಗೆ ಮೂಲಸೌಲಭ್ಯ ಕಲ್ಪಿಸುವ ಬದಲು ಕೇವಲ 5,000 ಶಾಲೆಗಳಿಗೆ ಮೂಲ ಸೌಲಭ್ಯನೀಡುವುದಾಗಿ ಪ್ರಸ್ಥಾಪಿಸಿದೆ. 1,000 ಶಾಲೆಗಳಿಗೆ ಮಾತ್ರ ಕಲಿಕಾಸಾಮಗ್ರಿಗಳಿಗೆ ಹಣ ತೆಗೆದಿಡಲಾಗಿದೆ. ಹಾಗಾದರೆ ಉಳಿದ ಶಾಲೆಗಳಿಗೆ ಕಲಿಕಾಸಾಮಗ್ರಿಗಳ ಅಗತ್ಯವಿಲ್ಲವೆ? ಸರಕಾರ ತಾರತಮ್ಯವನ್ನು ಹುಟ್ಟಿಸುತ್ತದೆ ಎಂದು ಎಸ್ಎಫ್ಐ ಬೇಸರ ವ್ಯಕ್ತಪಡಿಸಿದೆ.
ಇಂಗ್ಲಿಷ್ ಶಾಲೆಗಳಿಗೆ ವಿರೋಧ:
ಖಾಸಗಿ ಶಾಲೆಗಳನ್ನು ನಿಯಂತ್ರಿಸುವ ಬದಲು ಅವುಗಳಿಗೆ ಪೈಪೋಟಿ ನೀಡುವುದಕ್ಕಾಗಿ 1,000 ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವುದು ನಾಡದ್ರೋಹದ ಕೆಲಸವಾಗಿದೆ. ಸರಕಾರವೇ ಈ ರೀತಿ ಪೋಷಕರಿಗೆ ಇಂಗ್ಲಿಷ್ ವ್ಯಾಮೋಹವನ್ನು ತುಂಬುತ್ತಿರುವುದು
ಅಪಾಯಕಾರಿ ನಡೆಯಾಗಿದೆ. ಹಾಗಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸ್ಥಾಪನೆಯ ಪ್ರಸ್ಥಾಪವನ್ನು ಕೈ ಬಿಟ್ಟು, ಇಂಗ್ಲಿಷ್ ನ್ನು ಒಂದು ಭಾಷೆಯಾಗಿ ಕಲಿಸಬೇಕಿದೆ. ಸರಕಾರಿ ಶಾಲೆಗಳನ್ನು ಬಲಪಡಿಸಿ ಮಾತೃಭಾಷಾ ಶಿಕ್ಷಣಕ್ಕೆ ಮುಂದಾಗಬೇಕಿದೆ.
100 ಹಾಸ್ಟೇಲ್ ಗಳಿಗೆ ಸ್ವಂತ ಕಟ್ಟಡಕ್ಕೆ ಹಣ ನೀಡುವುದಾಗಿ ಜುಲೈ ತಿಂಗಳಲ್ಲಿ ಮಂಡಿಸಿದ್ದ ಬಜೆಟ್ ನಲ್ಲಿ ಹೇಳಲಾಗಿತ್ತು. ಅದನ್ನು ಜಾರಿ ಮಾಡದೆ ಮತ್ತೆ ಅದೇ ಭರವಸೆಯನ್ನು ಪುನರಾವರ್ತನೆ ಮಾಡಿದೆ. ಹಾಸ್ಟೇಲ್ ವಿದ್ಯಾರ್ಥಿಗಳ ಆಹಾರಭತ್ಯೆಯನ್ನು ಹೆಚ್ಚಿಸದಿರುವುದನ್ನು ಎಸ್ಎಫ್ಐ ವಿರೋಧಿಸುತ್ತದೆ.
ಉದ್ಯೋಗದ
ಕುರಿತು ಪ್ರಸ್ತಾಪವಿಲ್ಲ:
ನೇಮಕಾತಿಗಳ ಬಗ್ಗೆ ಸರಿಯಾದ ಪ್ರಸ್ಥಾಪವನ್ನು ಮಾಡದೆ ಉದ್ಯೋಗದ ಕುರಿತು ಕಾಲೇಜುಗಳಲ್ಲಿ ವಿಷಯವಾಗಿ ಕಲಿಸಲು ಪ್ರಸ್ಥಾಪಿಸಲಾಗಿದೆ. ಉದ್ಯೋಗವನ್ನು ಸೃಷ್ಟಿಮಾಡದೆ ಅದರ ಬಗ್ಗೆ ಅಧ್ಯಯನ ನಡೆಸಿದರೆ ಯಾವ ಪ್ರಯೋಜನವು ಸಿಗುವುದಿಲ್ಲ. ಈ ಮೂಲಕ ಉದ್ಯೋಗದ ಆಸೆಯಲ್ಲಿದ್ದವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಗಂಭೀರವಾಗಿ ಆರೋಪಿಸಿದೆ.
ಶಾಲೆಯಿಂದ
ಹೊರಗುಳಿದ ಮಕ್ಕಳ ನಿರ್ಲಕ್ಷ್ಯ:
ರಾಜ್ಯದಲ್ಲಿ 1,19 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರನ್ನು ಶಾಲೆಗೆ ಮರಳಿತರುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಸ್ಥಾಪಿಸಿಲ್ಲ. ಒಟ್ಟಿನಲ್ಲಿ
ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದ ಬಗ್ಗೆ ಅಸಡ್ಡೆ ತೋರಿದೆ. ಒಟ್ಟಾರೆ ರಾಜ್ಯ ಸರಕಾರ ಶಿಕ್ಷಣಕ್ಕೆ ಹಣ ಕಡಿತ ಗೊಳಿಸುವ ಮೂಲಕ ಸಮಸ್ಯೆಗಳಲ್ಲಿ ನರಳುವಂತೆ ಮಾಡಿದೆ ಈ ಬಜೆಟ್ ನ್ನು ಭಾರತ ವಿದ್ಯಾರ್ಥಿ ಫೇರೇಷನ್ ವಿರೋಧಿಸುತ್ತದೆ ಎಂದು ಬಜೆಟ್ಗೆ
ಪ್ರತಿಕ್ರಿಯೆ ನೀಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.