ಹಾಸನ, ಏ. 29, ನ್ಯೂಸ್ ಎಕ್ಸ್ ಪ್ರೆಸ್: ಹಾಸನದ ಪಡುವಲಹಿಪ್ಪೆಯಲ್ಲಿ ನಡೆದಿದೆ ಎನ್ನಲಾದ ಚುನಾವಣಾ ಅಕ್ರಮ ಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನಿಯೋಜಿತ ಚುನಾವಣಾ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮ ಮತಗಟ್ಟೆ 244ರಲ್ಲಿ ಅಕ್ರಮ ಮತದಾನ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಹಲವರು ಅಕ್ರಮವಾಗಿ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ಬೂತ್ ಕಾರ್ಯಕರ್ತರ ಆರೋಪಿಸಿದ್ದರು. ಬಳಿಕ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಅವರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ವಿಡಿಯೋ ವೀಕ್ಷಿಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿಯವರು, ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ನಡೆಸಿದ ಆಯೋಗ ಅಕ್ರಮ ಮತದಾನಕ್ಕೆ ಸಹಾಯ ಮಾಡಿದ ಆರೋಪದ ಮೇರೆಗೆ ಚುನಾವಣಾ ಅಧಿಕಾರಿಗಳಾಗಿದ್ದ ಯೋಗೇಶ್, ರಾಮಚಂದ್ರ ರಾವ್, ದಿನೇಶ್ರನ್ನು ಅಮಾನತ್ತುಗೊಳಿಸಿದೆ. ಇನ್ನು ಇದೇ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ ಕುಟುಂಬದ ಮತಗಳಿದ್ದು, ಮಾಜಿ ಪ್ರಧಾನಿ ದೇವೆಗೌಡರು, ಪತ್ನಿ ಚೆನ್ನಮ್ಮ, ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕೂಡ ಇಲ್ಲಿಯೇ ಮತ ಚಲಾಯಿಸಿದ್ದರು.