ಕೆ.ಆರ್.ಪುರ, ಜ. 07: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮೂಲನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಿಲ್ಲ, ಕಾಯ್ದೆಯ ಬಗ್ಗೆ ಕೆಲವರು ಇಲ್ಲ ಸಲ್ಲದ ಗೊಂದಲ ಸೃಷ್ಟಿ ಮಾಡುತ್ತಿದ್ದು, ಅಂತಹ ಉಹಾಪೋಹಗಳಿಗೆ ಕಿವಿಗೊಡಬೇಡಿ ಎಂದೂ ಸ್ಥಳೀಯ ಶಾಸಕ ಭೈರತಿ ಬಸವರಾಜ್ ತಿಳಿಸಿದರು.
ಕೆ.ಆರ್.ಪುರದ ಬಿಬಿಎಂಪಿ ಬಳಿ ಏರ್ಪಡಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಎಂದು ನಡೆಸಿದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಸವರಾಜ್, ಅನ್ಯ ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಹಿಂದೂ, ಜೈನ, ಭೌದ್ಧ, ಪಾರ್ಸಿ, ಸಿಖ್ ಹಾಗೂ ಕ್ರೈಸ್ತರಿಗೆ ಪೌರತ್ವ ನೀಡುವುದೇ ಈ ಕಾಯ್ದೆಯ ಉದ್ದೇಶ ಎಂದು ತಿಳಿಸಿದರು.
ಪೌರತ್ವ ಕಾಯ್ದೆಯಿಂದ ಸ್ಥಳೀಯ ಮೂಲನಿವಾಸಿ ಮುಸ್ಲಿಂರನ್ನು ದೇಶದಿಂದ ಹೊರ ಹಾಕುತ್ತಾರೆಂದು ಇಲ್ಲ ಸಲ್ಲದ ಆರೋಪದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಬಿ.ಎಂ.ಟಿ.ಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಜನರ ದಿಕ್ಕುತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ, ಕಾಯ್ದೆ ಬಳಸಿಕೊಂಡು ರಾಜಕೀಯ ಮಾಡದಂತೆ ಮನವಿ ಮಾಡಿದರು.
ಅನ್ಯದೇಶಗಳಲ್ಲಿ ಕಿರುಕುಳ ಅನುಭವಿಸಿ ಜೀವನ ಮಾಡಲು ಭಾರತಕ್ಕೆ ಬಂದಿರುವ ಹಿಂದೂ, ಜೈನ, ಭೌದ್ಧ ಧರ್ಮ ಸೇರಿದಂತೆ ಐದು ಧರ್ಮದವರಿಗೆ ಪೌರತ್ವ ನೀಡಿ ಜೀವನ ನಡೆಸಲು ಅವಕಾಶ ನೀಡುವುದೇ ಈ ಕಾಯ್ದೆಯ ಪ್ರಮುಖ ಉದ್ದೇಶ ಎಂದು ವಿವರಿಸಿದರು. ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳುವ ಮೂಲಕ ಕಾಯ್ದೆ ಬಗ್ಗೆ ಕರಪತ್ರ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.