ಬೆಂಗಳೂರು, ಅ. 5: ನಗರದ ಯಾವುದೇ ಬಡಾವಣೆಯ ರಸ್ತೆಗೆ ಹೋದರೂ ಕಿಷ್ಕಿಂಧೆಯಂತಿರುವ ರಸ್ತೆಗಳಲ್ಲಿ ವಾಹನ ಜೀವ ಬಿಗಿ ಹಿಡಿದು ಓಡಾಡುವಂತಹ ಅತ್ಯಂತ ಅಸಹನೀಯ ಪರಿಸ್ಥಿತಿ ನಿರ್ಮಾಣವಗಿದೆ.
ಅತ್ಯಂತ ಜನನಿಬೀಡ ಹಾಗೂ ವಾಣಿಜ್ಯ ವಹಿವಾಟಿಗೆ ಪ್ರಸಿದ್ದಿ ಹೊಂದಿರುವ ಗಾಂಧೀನಗರ ರಸ್ತೆ ಹಾಗೂ ಚರಂಡಿ ದುರಸ್ಥಿಯ ನೆಪದಲ್ಲಿ ಕಳೆದೊಂದು ವರ್ಷದಿಂದ ವಾಹನಗಳ ಸಂಚಾರವೇ ದುಸ್ತರವಾಗಿದೆ.
ಗಾಂಧಿ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆ ನಡಿಗೆಯಂತೆ ಸಾಗಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದಾರೆ. ಪಾದಚಾರಿ ರಸ್ತೆಗೆ ಕಲ್ಲು ಹಾಸು ಅಳವಡಿಸುವುದು, ಒಳಚರಂಡಿ ಅಭಿವೃದ್ಧಿ, ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೆಲಸ ಮಂದಗತಿಯಲ್ಲಿ ಸಾಗಿದೆ.
ಇದರಿಂದ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ. ದ್ವಿಚಕ್ರ ವಾಹನ ಸವಾರರು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ವಾಹನಗಳನ್ನು ತಳ್ಳಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಮಳೆ ಬರುತ್ತಿರುವುದರಿಂದ ರಸ್ತೆ ಕೆಸರುಗದ್ದೆಯಂತಾಗಿದೆ.
ಗುಂಡಿ ಗುದ್ದರಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ಮಹಿಳೆಯರು, ವೃದ್ಧರು ಮತ್ತಿತರರು ಜೀವ ಬಿಗಿಹಿಡಿದು ನಡೆದು ಹೋಗಬೇಕಾಗಿದೆ. ಮಾಡುತ್ತಾ ಸಾಗಬೇಕಾಗಿದೆ. ಸ್ವಲ್ಪ ಯಮಾರಿದರೂ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುವುದಂತೂ ಖಚಿತ.
ಕಾಮಗಾರಿಗೆ ಬಳಸುವ ಕಬ್ಬಿಣದ ರಾಡ್ ಮತ್ತಿತರರ ಸಲಕರಣೆಗಳು ರಸ್ತೆಯ ಪಕ್ಕದಲ್ಲೇ ಬಿದ್ದಿರುವುದರಿಂದ ವಾಹನಗಳು ಸಂಚರಿಸಲು ಸ್ಥಳಾವಕಾಶ ಇಲ್ಲದಂತಾಗಿದೆ. ಜನಸಾಮಾನ್ಯರು ಸಂಚರಿಸುವುದೇ ಕಷ್ಟ. ಇದರ ಮದ್ಯ ವ್ಯಸನಿಯೊಬ್ಬ ರಸ್ತೆಯಲ್ಲಿ ಸಂಚರಿಸಲಾಗದೆ ಪರದಾಡುತ್ತಿದ್ದಾಗ ಸಂಚಾರಿ ಪೊಲೀಸರು ನೆರವಾಗಿ ಆತನನ್ನು ಸುರಕ್ಷಿತವಾಗಿ ರಸ್ತೆ ಬದಿಗೆ ಕೈ ಹಿಡಿದು ಕರೆದೊಯ್ದು ಕೂರಿಸುತ್ತಿರುವಂತಹ ಮಾನವೀಯ ಘಟನೆಗಳು ಸರ್ವೇ ಸಾಮಾನ್ಯವಾಗುತ್ತಿವೆ.
ಕಳೆದ 6 ತಿಂಗಳಿಂದ ಇಲ್ಲಿನ ಹೋಟೆಲ್ ಮಾಲೀಕರು ಅಂಗಡಿಗಳು, ಬಟ್ಟೆ ವ್ಯಾಪಾರಿಗಳು ಸೇರಿದಂತೆ ವಸತಿಗೃಹಗಳು ಗಬ್ಬೆದ್ದು ನಾರುತ್ತಿರುವ ರಸ್ತೆಗಳಲ್ಲಿ ಓಡಾಡಲು ಸಾದ್ಯವಾಗದೇ ಇರುವುದರಿಂದ ಆಟೋಗಳು ಕೂಡಾ ಗಾಂಧೀನಗರಕ್ಕೆ ಬರುತ್ತಿಲ್ಲ.
ಗ್ರಾಹಕರ ಇಲ್ಲಿನ ರಸ್ತೆಗಳಿಗೆ ಕಾಲಿಟ್ಟರೆ ಎಲ್ಲಿ ಬಿದ್ದು ನರಕ ಯಾತನೆ ಜೊತೆಯಲ್ಲಿ ನೋವು ಅನುಭವಿಸ ಬೇಕಾಗುತ್ತದೋ ಎಂಬ ಕಾರಣಕ್ಕೆ ಬರುತ್ತಿಲ್ಲ. ಹಗಾಗಿ ವ್ಯಾಪಾರ ಇಲ್ಲದೇ, ಕೂಲಿ ಕಾರ್ಮಿಕರ ಕುಟುಂಬಗಳು ಒಪ್ಪತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ.
ಕಾಮಗಾರಿ ಶೀಘ್ರ ಪೂರ್ಣಗೊಂಡು ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡುವಂತೆ ಇಲ್ಲಿನ ವ್ಯಾಪಾರಿಗಳು ಸೇರಿದಂತೆ ನಿವಾಸಿಗಳ ಒಕ್ಕೋರಲಿನಿಂದ ಆಗ್ರಹಿಸುತ್ತಲೇ ಬಂದಿದ್ದರೂ ಪ್ರಯೋಜನವಾಗಿಲ್ಲ.