ಪ್ರತಿಭೆ ಹೊರಹಾಕಲಾರದೆ ಯುವಕರು ವಂಚಿತ

ಪ್ರತಿಭೆ ಹೊರಹಾಕಲಾರದೆ ಯುವಕರು ವಂಚಿತ

ಬೆಂಗಳೂರು, . 30: ಪೋಷಕರ ಒತ್ತಾಯದ ಮೇರೆಗೆ ಶಿಕ್ಷಣ ಪಡೆಯುತ್ತಿರುವ ಯುವಕರು ಅವರ ನಿಜವಾದ ಪ್ರತಿಭೆಯನ್ನು ಹೊರಹಾಕಲು ಆಗುತ್ತಿಲ್ಲ. ಹೀಗಾಗಿ ಅಂತಹವರಿಗೆ ಶಿಕ್ಷಣ ಪಡೆಯಲು ಅನುವು ಮಾಡಿಕೊಡುವ ಅವಶ್ಯಕತೆ ಇದ್ದು, ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಹೊರತುಪಡಿಸಿ, ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪೋಷಕರು ಯೋಚಿಸಬೇಕೆಂದು ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭ ತಿಳಿಸಿದರು.

ಯುವಕರಿಗೆ ಶಿಕ್ಷಣ, ತರಬೇತಿ ಹಾಗೂ ಉದ್ಯೋಗವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಬಹು ವಲಯ ಪಾಲುದಾರರ ಯೋಜನೆಯನ್ನು ರಾಜ್ಯದಲ್ಲಿ ಹಮ್ಮಿಕೊಳ್ಳುವ ಕುರಿತು ಸಮಾಲೋಚನಾ ಸಭೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ,  ಸವಿಸ್ತಾರವಾದ ಮಾರ್ಗಸೂಚಿಯನ್ನು ರೂಪಿಸಲು ರಾಜ್ಯ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಹಾಗೂ ಯುನಿಸೆಫ್ ಜಂಟಿಯಾಗಿ ರಾಜ್ಯಮಟ್ಟದ ಸಮಾಲೋಚನಾ ಸಭೆಯನ್ನು ನಡೆಸಲಾಯಿತು.

ನಂತರ ರತ್ನಪ್ರಭಾ ಮಾತನಾಡಿ, ಯುವಜನ ಸಬಲೀಕರಣ ಹಾಗೂ ಕೌಶಲ್ಯ ಅಭಿವೃದ್ಧಿಯು ಪ್ರಧಾನ ಮಂತ್ರಿಯವರ ಮುಖ್ಯ ಧ್ಯೇಯಗಳಲ್ಲಿ ಒಂದಾಗಿದ್ದು, ಇದಕ್ಕೆ ಪೂರಕವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶ್ರಮಿಸುತ್ತಿರುವುದು ಶ್ಲಾಗನೀಯವಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಯುನಿಸೆಫ್ ಸಂಸ್ಥೆಯು ಸಹ ಮುಂದೆ ಬಂದಿರುವುದು ಪ್ರಶಂಸನೀಯ ಎಂದು ಹೇಳಿದರು.

ಕೇವಲ ಬೆಂಗಳೂರು, ಇತರ ನಗರ ಪ್ರದೇಶಗಳ ಯುವಕರನ್ನು ಪ್ರೋತ್ಸಾಹಿಸದೇ ಹಿಂದುಳಿದ ಭಾಗಗಳ ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯನ್ನು ಒತ್ತಿ ಹೇಳಿದರು. ಕೇವಲ ಸಂಪ್ರದಾಯಿಕ ಕಾರ್ಯಕ್ರಮಗಳಾದ ಹೊಲಿಗೆ, ಕಸೂತಿ, ಹಪ್ಪಳ ಮುಂತಾದವುಗಳನ್ನು ಹೊರತುಪಡಿಸಿ ಕೆಲವು ವಿಶೇಷ ತರಬೇತಿಗಳನ್ನು ಹಮ್ಮಿಕೊಂಡು ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕೆಂದು ತಿಳಿಸಿದರು.

ಯೋಜನೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ಯುವಜನ ಸಬಲೀಕರಣ ಕಾರ್ಯಕ್ರಮವು ರಾಜ್ಯದಲ್ಲಿ ಹಾಲಿ ಜಾರಿಯಲ್ಲಿರುವ ಅನೇಕ ಯುವ ಸಬಲೀಕರಣ ಕಾರ್ಯಕ್ರಮಗಳಿಗೆ ಪೂರಕವಾಗುವುದಲ್ಲದೆ, ದುರ್ಬಲ ಯುವಕರ ಅಗತ್ಯತೆಗಳನ್ನು ಪೂರೈಸುವಲ್ಲಿ ಸಹಾಯವಾಗುತ್ತದೆ ಎಂದು ತಿಳಿಸಿದರು.

ಯುನಿಸೆಫ್‌ನ ಕ್ಷೇತ್ರಾಧಿಕಾರಿ ಮೀಟಲ್ ರಸ್ದಿಯಾ ಮಾತನಾಡಿ ಯುವಕರನ್ನು ಸಬಲೀಕರಿಸುವುದರಿಂದ ಅವರ ಪ್ರಗತಿಗೆ ಪೂರಕವಾಗುವುದಲ್ಲದೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಪರಿಣಾಮ ಬೀರಿ ಸಾವಿರಾರು ಕುಟುಂಬಗಳು ಪ್ರಯೋಜನ ಪಡೆಯುತ್ತವೆ ಎಂದು ತಿಳಿಸಿದರು.

ಈ ಕಾರ್ಯಗಾರದಲ್ಲಿ ಸರ್ಕಾರಿ ಅಧಿಕಾರಿಗಳು, ಸಮಾಜದ ಪ್ರತಿಷ್ಠಿತ ಸದಸ್ಯರು ಹಾಗೂ ಯುವಕರು ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೇವೇಳೆ ಸಲಹೆಗಳನ್ನಾಧರಿಸಿ ಸರ್ಕಾರಕ್ಕೆ ಒಂದು ವರದಿಯನ್ನು ಸಹಾ ನೀಡಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos