ನವದೆಹಲಿ, ಡಿ. 23 : ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. ಮೂವರು ತೀವ್ರ ಗಾಯಗೊಂಡಿದ್ದ, ಗಾಯಾಳುಗಳಲ್ಲಿ ಇಬ್ಬರು ಮಕ್ಕಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಮೃತರನ್ನು ರಾಮಚಂದ್ರ ಝಾ (65), ಸುಧಾರಿಯಾ ದೇವಿ (51), ಸಂಜು ಝಾ (38), ಉದಯ್ ಝಾ(35) ಹಾಗೂ ಅವರ ಪತ್ನಿ ಮುಸ್ಕಾನ್ (26) ಮತ್ತು ಮಕ್ಕಳಾದ ಅಂಜಲಿ (10), ಆದರ್ಶ್(7), ಮೂರು ತಿಂಗಳ ಮಗು ತುಳಸಿ ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ.
ಈ ದುರ್ಘಟನೆಯಲ್ಲಿ ಪೂಜಾ(24) ಮತ್ತು ಮಕ್ಕಳಾದ ಆರಾಧ್ಯ(3) ಮತ್ತು ಸೌಮ್ಯ(10) ಅವರನ್ನು ಸಂಜಯ್ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಸ್ಥಿತಿ ಶೋಚನೀಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೆಹಲಿಯ ಕಿರಾರಿ ಎಂಬಲ್ಲಿ ಬಟ್ಟೆಯ ಗೋದಾಮು ಮತ್ತು ಮನೆಗಳಿದ್ದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಇಂದು 12.30ರ ನಸುಕಿನಲ್ಲಿ ಬೆಂಕಿ ದುರಂತ ಸಂಭವಿಸಿತ್ತು. ಸುದ್ದಿ ತಿಳಿದ ಕೂಡಲೇ 8 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸುಮಾರು 3 ತಾಸುಗಳ ಕಾಲ ಶ್ರಮಿಸಿ ಬೆಳಗಿನ ಜಾವ 3.50ರಲ್ಲಿ ಬೆಂಕಿಯ ಕೆನ್ನಾಲಿಗೆಯನ್ನು ಶಮನಗೊಳಿಸಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದ ವೇಳೆ ಮೂವರು ಸುಟ್ಟು ಕರಕಲಾಗಿದ್ದರು. ಉಳಿದ 9 ಜನರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸುಟ್ಟ ಗಾಯ ಮತ್ತು ಉಸಿರುಗಟ್ಟಿದ್ದರಿಂದ ಇತರ ಆರು ಮಂದಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.