ಬೆಂಗಳೂರು: “ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ನೂರಾರು ನಾಯಕರು ಬರುತ್ತಾರೆ, ಹೋಗುತ್ತಾರೆ. ಯಾರೇ ಬರಲಿ, ಯಾರೇ ಹೋಗಲಿ ಪಕ್ಷಕ್ಕೆ ಅದರಿಂದ ನಷ್ಟವಾಗುವುದಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಜಗದೀಶ್ ಶೆಟ್ಟರ್ ಅವರು ಬಿಜೆಪಿ ಆಂತರಿಕ ವಿಚಾರದಿಂದ ಬೇಸತ್ತು ಆ ಪಕ್ಷದವರ ವಿರುದ್ಧ ದೊಡ್ಡ ಆರೋಪ ಮಾಡಿ ಕಾಂಗ್ರೆಸ್ ಸೇರಿದ್ದರು. ಅವರಿಗೆ ಪಕ್ಷದ ಟಿಕೆಟ್ ನೀಡಿದ್ದೆವು. 35 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಆದರೂ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದ್ದೆವು. ಕಳೆದ 2-3 ತಿಂಗಳಿಂದ ಬಿಜೆಪಿ ನಾಯಕರು ಅವರನ್ನು ಸಂಪರ್ಕ ಮಾಡುತ್ತಿದ್ದರು. ಮೊನ್ನೆ ಕೂಡ ಬಿಜೆಪಿ ಸೇರುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ನಿನ್ನೆ ಏಕಾಏಕಿ ಪಕ್ಷ ತೊರೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.