ದಸರಾ ಮನೆ ಮನೆಯ ಹಬ್ಬವಾಗಬೇಕು: ಶಾಸಕ ಬಿ. ಶಿವಣ್ಣ

ದಸರಾ ಮನೆ ಮನೆಯ ಹಬ್ಬವಾಗಬೇಕು: ಶಾಸಕ ಬಿ. ಶಿವಣ್ಣ

ಆನೇಕಲ್, ಅ. 9: ದುಷ್ಟ ಶಕ್ತಿಗಳ ಸಂಹಾರಕ್ಕಾಗಿ ನವರಾತ್ರಿಯ ಆಚರಣೆ ಮಾಡುತ್ತಾ ಬಂದಿರುವ ಸಂಪ್ರದಾಯದಂತೆ ಪಟ್ಟಣದಲ್ಲಿ ಅದ್ದೂರಿ ಜಂಬೂ ಸವಾರಿ ಉತ್ಸವ ಮಾಡುತ್ತಿರುವುದು ಶೋಭೆ ತಂದಿದೆ. ಇದು ಮನೆ ಮನೆಯ ಹಬ್ಬವಾಗಬೇಕು ಎಂದು ಆನೇಕಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ. ಶಿವಣ್ಣ ಹೇಳಿದರು.

ಅವರು  ಪಟ್ಟಣದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ವಿಜಯದಶಮಿ ಅಂಬಾರಿ ಉತ್ಸವ ಸಮಾರಂಭದ ಅಧ್ಯಕ್ಷತೆವಹಸಿ ಮಾತನಾಡಿದರು, ಎಲ್ಲರ ಕಷ್ಟಗಳನ್ನು ಹೋಗಲಾಡಿಸಿ ಪ್ರತಿಯೊಬ್ಬರೂ ಸುಖ, ಶಾಂತಿ, ನೆಮ್ಮದಿಯಿಂದ ಬಾಳುವಂತೆ ಚೌಡೇಶ್ವರಿ ತಾಯಿ ಕರುಣಿಸಲಿ, ಎಲ್ಲರ ಜೀವನದಲ್ಲು ದುಷ್ಟ ಶಕ್ತಿಗಳ ಆಹ್ವಾನವಾಗದಂತೆ ಆ ತಾಯಿ ಕಾಪಾಡಲಿ  ಎಂದು ಹೇಳಿದರು.

ತೊಗಟ ವೀರ ಪುಷ್ಪಾಂಜಲಿ ಮುನಿ ಗುರು ಪೀಠದ ಶ್ರೀ ದಿವ್ಯ ಜ್ಞಾನಾನಂದ ಗಿರಿ ಶ್ರೀಗಳು ಮಾತನಾಡಿ, ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯ ಬೇಕಾದರೆ ಶಾಂತಿ ಸಂಯಮವನ್ನು ಕಾಪಾಡಿಕೊಳ್ಳ ಬೇಕು. ದುಷ್ಟಚಟಗಳನ್ನು ಮೆಟ್ಟಿನಿಲ್ಲುವ ಅವಶ್ಯಕತೆ ಇದ್ದು, ಅಂತಹ ಸಂಕಲ್ಪವನ್ನು ಮಾಡಬೇಕು. ಬದುಕು ಹಸನಾಗಲು ಶಿಕ್ಷಣದ ಅರಿವು ಜ್ಞಾನ ಅತ್ಯವಶಕ ಎಂದು ಹೇಳಿದರು. ವಿಜಯ ದಶಮಿಯು ವಿಜಯದ ಸಂಕೇತವಾಗಿದ್ದು, ದುಷ್ಟ ಚಟಗಳನ್ನು ದೂರವಿಡುತ್ತೇನೆ ಎಂದು ಸಂಕಲ್ಪ ಮಾಡಿ ಅಮ್ಮನವರ ದರ್ಶನ ಪಡೆಯ ಬೇಕು ಎಂದು ತಿಳಿಸಿದರು.

ಶ್ರೀ ಚೌಡೇಶ್ವರಿ ಅಮ್ಮನವರ ಅಂಬಾರಿ ಹೊತ್ತ ಆನೆಗೆ ಪುಷ್ಪ ವೃಷ್ಠಿ ಮಾಡುವ ಮೂಲಕ ಜಂಬೂ ಸವಾರಿ ಉತ್ಸವಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯ ಡಾ. ಎ.ನಾರಾಯಣಸ್ವಾಮಿ, ಆನೇಕಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ. ಶಿವಣ್ಣ ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ. ಮುನಿರಾಜು ಚಾಲನೆ ನೀಡಿದರು.

ಅಪಾರ ಜನಸ್ತೋಮದ ಮಧ್ಯ ಸಾಗಿದ ಅಂಬಾರಿ ಹೊತ್ತ ಆನೆಯೊಂದಿಗೆ ಪೂರ್ಣಕುಂಭಸಮೇತ ಜಾನಪದ ಕಲಾತಂಡಗಳಾದ ಪಂಚವಾದ್ಯ, ಚಂಡೆ ಮದ್ದಳೆ, ಮಂಗಳವಾದ್ಯ, ಪುರವಂತಿಗೆ ಮೇಳ, ಗಾರುಡಿ ಗೊಂಬೆಗಳು, ತಾವಡಿ ಕುಣಿತ, ಕಥಕಳಿ ನೃತ್ಯ, ನಗಾರಿ ಮಂಗಳ ಜ್ಯೋತಿ, ನಾಯಂಡಿ ವಾದ್ಯ, ಮರಗಾಲು ಕುಣಿತ, ಹಾಲಕ್ಕಿ ಕುಣಿತ ಬಾಲ ಕಲಾವಿದರ ವೀರಗಾಸೆ ಕುಣಿತ, ವಾನಂಬಾಡಿ ಡ್ರಂ ಸೆಟ್, ಅಶ್ವದಳ, ಓಂಟೆ ದಳ, ಕೀಲು ಕುದರೆ ಯಂತಹ ಅತ್ಯಾಕರ್ಷಕ  ನೃತ್ಯಗಳು ನೋಡುಗರ ಮನಸ್ಸನ್ನು ರಂಜಿಸಿದವು.

ಸಮಾರಂಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ. ಮುನಿರಾಜು, ಜಿ.ಪಂ ಸದಸ್ಯ ಬಂಡಾಪುರದ ಎಂ.ರಾಮಚಂದ್ರ, ಪುರಸಭಾ ಸದ್ಯರಾದ ಎನ್.ಎಸ್. ಪದ್ಮನಾಭ, ಬಿ,ನಾಗರಾಜು, ಕಾಂಗ್ರೆಸ್ ಮುಖಂಡ ಹರೀಶ್ ಗೌಡ  ಯಂಗಾರೆಡ್ಡಿ ಮುಂತಾದವರು ಮಾತನಾಡಿದರು.

 

 

 

 

ಫ್ರೆಶ್ ನ್ಯೂಸ್

Latest Posts

Featured Videos