ನವದೆಹಲಿ, ಮಾ.29, ನ್ಯೂಸ್ ಎಕ್ಸ್ ಪ್ರೆಸ್: 17ನೇ ಲೋಕಸಭಾ ಚುನಾವಣೆಗೆ ಸಿಪಿಐ(ಎಂ)ನ ಚುನಾವಣಾ ಪ್ರಣಾಳಿಕೆಯನ್ನು ಮಾರ್ಚ್ 28 ರಂದು ಬಿಡುಗಡೆ ಮಾಡಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಪೊಲಿಟ್ ಬ್ಯುರೊ ಸದಸ್ಯರಾದ ಪ್ರಕಾಶ ಕಾರಟ್, ಎಸ್.ಆರ್.ಪಿಳ್ಳ, ಬೃಂದಾ ಕಾರಟ್, ಹನ್ನನ್ ಮೊಲ್ಲ, ಸುಭಾಷಿಣಿ ಅಲಿ ಮತ್ತು ನೀಲೋತ್ಪಲ ಬಸು ಅವವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಪ್ರಣಾಳಿಕೆಯ ಆಡಿಯೋ ಆವೃತ್ತಿಯನ್ನೂ, ಅಂದರೆ ಧ್ವನಿಸುರಳಿಯನ್ನೂ ಬಿಡುಗಡೆ ಮಾಡಲಾಯಿತು. ಇದು ಬಹುಶಃ ದೇಶದ ಚುನಾವಣಾ ಇತಿಹಾಸದಲ್ಲಿಯೇ ಮೊದಲ ಬಾರಿ ಇರಬಹುದು. ಬಹುಶಃ ಜಗತ್ತಿನಲ್ಲೂ ಮೊದಲ ಬಾರಿಗೆ ಇರಬಹುದು ಎಂದ ಯೆಚುರಿಯವರು ಇದನ್ನು ನಮ್ಮ ಸಮಾಜದ ಅತ್ಯಂತ ಅಂಚಿಗೆ ತಳ್ಳಲ್ಪಟ್ಟಿರುವ, ಮತ್ತು ಅತ್ಯಂತ ಅನನುಕೂಲಕರ ಸ್ಥಿತಿಯಲ್ಲಿರುವ ವಿಭಾಗಗಳ ಅನುಕೂಲಕ್ಕಾಗಿ ಎಂದು ಹೇಳಿದರು.
ಸಿಪಿಐ(ಎಂ) ಪ್ರಣಾಳಿಕೆಯ ಮುಖ್ಯಾಂಶಗಳು:
1. ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯತೀತತೆಯ ನೀತಿ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸಿ
2. ರೈತರು ತಮ್ಮ ಉತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕನ್ನು ಜಾರಿಗೊಳಿಸಿ; ಈ ಬೆಂಬಲ ಬೆಲೆ ಒಟ್ಟು ಉತ್ಪಾದನೆಯ ಖರ್ಚಿಗಿಂತ ಕನಿಷ್ಟ 50ಶೇ.ದಷ್ಟು ಹೆಚ್ಚಿರಬೇಕು.
3. ತಿಂಗಳಿಗೆ ರೂ.18,000ಕ್ಕಿಂತ ಕಡಿಮೆಯಿಲ್ಲದಂತೆ ಕಾರ್ಮಿಕರಿಗೆ ಶಾಸನಾತ್ಮಕ ಕನಿಷ್ಟ ಸಂಬಳ; ಇದನ್ನು ಬಳಕೆದಾರರ ಬೆಲೆ ಸೂಚ್ಯಂಕಕ್ಕೆ ಜೋಡಿಸಿರಬೇಕು.
4. ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪ್ರತಿ ಕುಟುಂಬಕ್ಕೆ 35 ಕೆ.ಜಿ. ಅಥವ ಪ್ರತಿ ವ್ಯಕ್ತಿಗೆ 7 ಕೆ.ಜಿ. ಆಹಾರಧಾನ್ಯಗಳು ಕೆ.ಜಿ.ಗೆ ಗರಿಷ್ಟ 2ರೂ. ಬೆಲೆಯಲ್ಲಿ.
5. ಪುಕ್ಕಟೆ ಆರೋಗ್ಯ ಪಾಲನೆಯ ಹಕ್ಕು; ಖಾಸಗಿ ವಿಮೆ ಆಧಾರಿತ ಆರೋಗ್ಯ ಪಾಲನೆ ಬೇಡ; ಆರೋಗ್ಯದ ಮೇಲೆ ಸಾರ್ವಜನಿಕ ವೆಚ್ಚವನ್ನು ಜಿ.ಡಿ.ಪಿ.ಯ 5ಶೇ.ಕ್ಕೆ ಏರಿಸಬೇಕು.
6. ಮಹಿಳೆಯರಿಗೆ ಸಂಸತ್ತಿನಲ್ಲಿ ಮತ್ತು ವಿಧಾನ ಸಭೆಗಳಲ್ಲಿ ಮೂರನೇ ಒಂದು ಮೀಸಲಾತಿಯನ್ನು ಜಾರಿಗೆ ತರಬೇಕು; ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸಾಚಾರವನ್ನು ಕೊನೆಗೊಳಿಸಲು ಸಮಗ್ರ ಕ್ರಮಗಳು.
7. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ-ಶಾಲೆಗಳು ಮತ್ತು ಉನ್ನತ ಶಿಕ್ಷಣದ ಬಹು ದೊಡ್ಡ ವಿಸ್ತರಣೆ; ಶಿಕ್ಷಣದ ಮೇಲೆ ಸಾರ್ವಜನಿಕ ವೆಚ್ಚದ ಪ್ರಮಾಣವನ್ನು ಜಿ.ಡಿ.ಪಿ.ಯ 6 ಶೇ.ಕ್ಕೆ ಏರಿಸಬೇಕು; ಶಿಕ್ಷಣ ವ್ಯವಸ್ಥೆಯ ಕೋಮುವಾದೀಕರಣವನ್ನು ಕೊನೆಗೊಳಿಸಬೇಕು, ಅದರ ಪ್ರಜಾಪ್ರಭುತ್ವ ಸ್ವರೂಪವನ್ನು ಖಾತ್ರಿಗೊಳಿಸಬೇಕು.
8. ಉದ್ಯೋಗದ ಹಕ್ಕು ಮೂಲಭೂತ ಸಂವಿಧಾನಿಕ ಹಕ್ಕು ಆಗಬೇಕು; ಉದ್ಯೋಗವಿಲ್ಲದವರಿಗೆ ನಿರುದ್ಯೋಗ ಭತ್ತೆಯನ್ನು ಕೊಡಬೇಕು.
9. ಎಲ್ಲ ನಾಗರಿಕರಿಗೆ ವೃದ್ಧಾಪ್ಯ ಪಿಂಚಣಿ-ಮಾಸಿಕ ಪಿಂಚಣಿ ಮೊತ್ತ ಕನಿಷ್ಟ ಸಂಬಳದ ಅರ್ಧಕ್ಕಿಂತ ಕಡಿಮೆಯಾಗಬಾರದು, ಯಾವುದೇ ಸಂದರ್ಭದಲ್ಲೂ ಇದು 6000ರೂ.ಗಿಂತ ಕಡಿಮೆಯಿರಬಾರದು.
10. ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಮತ್ತು ರಕ್ಷಣೆ, ಇಂಧನ ಮತ್ತು ರೈಲ್ವೆ ಹಾಗೂ ಮೂಲ ಸೇವೆಗಳ ಖಾಸಗೀಕರಣವನ್ನು ಹಿಂದಕ್ಕೆ ಪಡೆಯಬೇಕು.
11. ಡಿಜಿಟಲ್ ಮೂಲರಚನೆಯನ್ನು ಸಾರ್ವಜನಿಕ ಮೂಲರಚನೆಯಾಗಿ ಮಾನ್ಯ ಮಾಡಬೇಕು ಮತ್ತು ಅದನ್ನು ಸಾರ್ವಜನಿಕ ಒಳಿತಿಗೆ ಬಳಸಬೇಕು
12. ಖಾಸಗೀ ವಲಯದಲ್ಲಿ ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಮೀಸಲಾತಿ
13. ಶ್ರೀಮಂತರು ಮತ್ತು ಕಾರ್ಪೊರೇಟ್ಗಳ ಲಾಭಗಳ ಮೇಲೆ ತೆರಿಗೆಗಳನ್ನು ಹೆಚ್ಚಿಸಬೇಕು; ಅತಿ ಶ್ರೀಮಂತರ ಮೇಲೆ ಸಂಪತ್ತು ತೆರಿಗೆಯನ್ನು ಹಾಗೂ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆಯನ್ನು ಮತ್ತೆ ತರಬೇಕು ಮತ್ತು ವಾರಸುದಾರಿಕೆ ತೆರಿಗೆಯನ್ನು ಆರಂಭಿಸಬೇಕು.
14. ಚುನಾವಣಾ ವ್ಯವಸ್ಥೆಯ ಸುಧಾರಣೆ; ಆನುಪಾತಿಕ ಪ್ರಾತಿನಿಧ್ಯವನ್ನು ಭಾಗಶಃ ಪಟ್ಟಿ ಪದ್ಧತಿಯೊಂದಿಗೆ ಆರಂಭಿಸಬೇಕು. ಚುನಾವಣಾ ಬಾಂಡುಗಳನ್ನು ರದ್ದು ಮಾಡಬೇಕು; ಚುನಾವಣಾ ವೆಚ್ಚಗಳಿಗೆ ವಸ್ತು ರೂಪದಲ್ಲಿ ಪ್ರಭುತ್ವದಿಂದ ನಿಧಿ ನೀಡಿಕೆ
ಜಾತ್ಯತೀತತೆಯ ರಕ್ಷಣೆ:
ಬಿ.ಜೆ.ಪಿ. ಸರಕಾರ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿರುವ ಆರೆಸ್ಸೆಸ್ ಸಿಬ್ಬಂದಿಯನ್ನು ತೆಗೆದು ಹಾಕಬೇಕು; ಕೋಮುವಾದಿ ಹಿಂಸಾಚಾರದ ವಿರುದ್ಧ ಒಂದು ಸಮಗ್ರ ಕಾನೂನು ತರಬೇಕು.
ಕೋಮುವಾದಿ ಹಿಂಸಾಚಾರಗಳಿಗೆ ಒಳಗಾದವರಿಗೆ, ಒಕ್ಕೂಟ ಚೌಕಟ್ಟನ್ನು ಉಲ್ಲಂಘಿಸದೆ, ತ್ವರಿತ ನ್ಯಾಯ ಮತ್ತು ಸಾಕಷ್ಟು ಪರಿಹಾರ ಹಾಗೂ ಪ್ರಭುತ್ವದ ಬೆಂಬಲ.
ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆಗಳನ್ನು ನಡೆಸುವ ಮತ್ತು ದ್ವೇಷವನ್ನು ಹರಡಿಸುವ ವಿವಿಧ ‘ಸೇನೆಗಳು’ ಮತ್ತಿತರ ಕಾನೂನುಬಾಹಿರ ಖಾಸಗಿ ಪಡೆಗಳು ಮತ್ತು ಕಾವಲುಕೋರ ಗುಂಪುಗಳು ಎಲ್ಲವನ್ನೂ ತಕ್ಷಣವೇ ನಿಷೇಧಿಸಬೇಕು.
ಕೋಮುವಾದಿ ದ್ವೇಷವನ್ನು ಹರಡುವಲ್ಲಿ ಮತ್ತು ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುವಲ್ಲಿ ತೊಡಗಿರುವ ಸಂಘಟನೆಗಳು ಮತ್ತು ಸಂಸ್ಥೆಗಳ ಮೇಲೆ ಲಗಾಮು ಹಾಕಲು ಮತ್ತು ಅವುಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ಶಾಸನಾತ್ಮಕ ಕ್ರಮಗಳನ್ನು ರೂಪಿಸಬೇಕು.
ಹೊಡೆದು ಸಾಯಿಸುವುದರ ವಿರುದ್ಧ ಒಂದು ಕಾನೂನನ್ನು ರೂಪಿಸಬೇಕು.
ಕೋಮುವಾದಿ ಹಿಂಸಾಚಾರವನ್ನು ನಡೆಸುವವರಿಗೆ ಅವರ ಸಾರ್ವಜನಿಕ ಅಥವ ಅಧಿಕೃತ ಸ್ಥಾನಮಾನವನ್ನು ಪರಿಗಣನೆಗೆ ತಗೊಳ್ಳದೆ ಉದಾಹರಣೆಯಾಗಬಲ್ಲ ಶಿಕ್ಷೆಯಾಗುವುದನ್ನು ಖಾತ್ರಿಪಡಿಸಬೇಕು.
ಯಾವುದೇ ಭಯ ಅಥವ ಪಕ್ಷಪಾತವಿಲ್ಲದೆ ಒಂದು ಸಮಾನತೆಯ ಮತ್ತು ಘನತೆಯ ಬದುಕು ನಡೆಸುವ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು.
ಎಲ್ಲ ಶಾಲಾ ಪಠ್ಯಪುಸ್ತಕಗಳಲ್ಲಿ ಕೋಮುವಾದಿ ಪಕ್ಷಪಾತ ಮತ್ತು ಪೂರ್ವಾಗ್ರಹಯುಕ್ತ ಅಂಶಗಳನ್ನು ತೆಗೆದು ಹಾಕಬೇಕು.
ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆ:
ಯಾವುದೇ ಅಂತರ್ರಾಷ್ಟ್ರೀಯ ಸಂಧಿಗೆ ಸಂಸದೀಯ ಮಂಜೂರಾತಿಯನ್ನು ಕಡ್ಡಾಯಗೊಳಿಸುವಂತೆ ಸಂವಿಧಾನಕ್ಕೆ ತಿದ್ದುಪಡಿಯನ್ನು ತರಬೇಕು.
ವಸಾಹತುಶಾಹೀ ಕಾಲದ ರಾಜದ್ರೋಹದ ಕಾಯ್ದೆ, ಭಾರತೀಯ ದಂಡ ಸಂಹಿತೆ(ಐ.ಪಿ.ಸಿ.)ಯ ಸೆಕ್ಷನ್ 124ಎ ನ್ನು ರದ್ದು ಮಾಡಬೇಕು.
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ(ಎ.ಎಫ್.ಪಿ. ಎಸ್.ಎ.)ಯನ್ನು ರದ್ದು ಮಾಡಿ ಅದರ ಜಾಗದಲ್ಲಿ ಸಶಸ್ತ್ರ ಪಡೆಗಳ ಕಾರ್ಯಾಚರಣೆಗಳಿಗೆ ಕರಾಳ ಅಂಶಗಳಿಲ್ಲದ ಒಂದು ಕಾನೂನು ಚೌಕಟ್ಟನ್ನು ಒದಗಿಸುವ ಸೂಕ್ತ ಕಾಯ್ದೆಯನ್ನು ರೂಪಿಸಬೇಕು.
ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್.ಎಸ್.ಎ.)ಯನ್ನು ರದ್ದು/ ತಿದ್ದುಪಡಿ ಮಾಡಬೇಕು.
ಮಾನಹರಣ ಕುರಿತ ಐ.ಪಿ.ಸಿ.ಯ ಸೆಕ್ಷನ್ 499ನ್ನು ರದ್ದು ಮಾಡಬೇಕು.
ಪೀಡನೆ ಮತ್ತು ಇತರ ಕ್ರೂರ, ಅಮಾನವೀಯ ಅಥವ ಕೀಳಾಗಿಸುವ ವರ್ತನೆ ಅಥವ ಶಿಕ್ಷೆಯ ವಿರುದ್ಧ ಕೈಗೊಂಡಿರುವ ಅಧಿನಿರ್ಣಯವನ್ನು ಊರ್ಜಿತಗೊಳಿಸಬೇಕು.
ಮರಣ ದಂಡನೆಯನ್ನು ತೆಗೆದು ಹಾಕಲು ಭಾರತೀಯ ದಂಡ ಸಂಹಿತೆ ಮತ್ತು ಇತರ ಶಾಸನಗಳಲ್ಲಿ ತಿದ್ದುಪಡಿ ಮಾಡಬೇಕು.
ಒಂದು ನಾಗರಿಕರ ಸನ್ನದು ಮತ್ತು ದೂರು ಪರಿಹಾರ ಕಾಯ್ದೆಯನ್ನು ರೂಪಿಸಬೇಕು, ಈ ಮೂಲಕ ಸಮಯಬದ್ಧವಾಗಿ ಸೇವೆಗಳು ಒದಗುವಂತಾಗಲು ಮತ್ತು ದೂರು ಪರಿಹಾರ ಸಿಗುವಂತಾಗಲು ಒಂದು ಕಾನೂನು ಚೌಕಟ್ಟನ್ನು ಒದಗಿಸಬೇಕು.
ಸಾರ್ವಜನಿಕ ಕಾರ್ಯಕ್ರಮಗಳ ಪರಿಣಾಮ ಮತ್ತು ನಿರ್ವಹಣೆಯ ಮೌಲ್ಯಮಾಪನಕ್ಕೆ ಸಾಮಾಜಿಕ ಪರಿಶೋಧನೆ ಮತ್ತು ಜವಾಬುದಾರಿಕೆಯನ್ನು ಕಡ್ಡಾಯಗೊಳಿಸಲು ಒಂದು ಶಾಸನವನ್ನು ರೂಪಿಸಬೇಕು ಮತ್ತು ಇದನ್ನು ಆಳ್ವಿಕೆಯ ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸಬೇಕು ಮತ್ತು ಸರಕಾರ ತನ್ನ ಜನಾದೇಶಕ್ಕೆ ಜವಾಬುದಾರನಾಗುವಂತೆ ಮಾಡಲು ಪ್ರತಿಯೊಬ್ಬ ನಾಗರಿಕರನ್ನು ಸಬಲೀಕರಿಸಬೇಕು.
ಎಲ್ಲ ಸಾಮಾಜಿಕ ಕಲ್ಯಾಣ ಕ್ರಮಗಳಿಗೆ ಆಧಾರ್ ಮತ್ತು ಬಯೋಮೆಟ್ರಿಕ್ ಬಳಕೆಯನ್ನು ರದ್ದುಪಡಿಸಬೇಕು.