ಕಲಬುರಗಿ, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತಬೇಟೆ – ಮಾಡಿದ ಕೆಲಸಕ್ಕೆ ಕೂಲಿಯಾಗಿ ಮತ ಕೊಡಿ ಅಂದ್ರು ಮಲ್ಲಿಕಾರ್ಜುನ ಖರ್ಗೆ- ಮತದಾರರಿಗೆ ಕೆಟ್ಟ ಹೆಸರು ತರೋ ಕೆಲಸ ನಾನೆಂದು ಮಾಡಿಲ್ಲವೆಂದು ಸಮರ್ಥನೆ ಕಲಬುರಗಿ ಮತದಾರರಿಗೆ ಕೆಟ್ಟ ಹೆಸರು ತರೋ ಕೆಲಸ ನಾನೆಂದೂ ಮಾಡಿಲ್ಲ. ಸಂಸತ್ನಲ್ಲಿ ತಲೆ ಎತ್ತಿ ಮಾತನಾಡಿದ್ದೇನೆ ಹೊರತು ತಲೆತಗ್ಗಿಸುವ ಕೆಲಸ ಮಾಡಿಲ್ಲ. ನಾನೂ ಸ್ವಲ್ಪ ಕೆಲಸ ಮಾಡಿದ್ದು, ಅದಕ್ಕೆ ಕೂಲಿ ಕೊಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಮನವಿ ಮಾಡಿದರು. ಮಂದಾರ ಪುಷ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಆಶಯಗಳ ವಿರುದ್ಧವಾಗಿ ಬಿಜೆಪಿ ವರ್ತಿಸುತ್ತಿದೆ ಎಂದು ಕಿಡಿಕಾರಿದರು. ಸಂವಿಧಾನ ಹೋದಲ್ಲಿ ಮತ್ತೆ ಮನುಸ್ಮೃತಿ ಬರುತ್ತದೆ. ಮನುಸ್ಮೃತಿಯನ್ನು ಸಂವಿಧಾನದ ಸ್ಥಾನಕ್ಕೆ ತರುವ ದುರುದ್ದೇಶದಿಂದ ಬಿಜೆಪಿಯವರು ಸಂವಿಧಾನದ ತಿದ್ದುಪಡಿ ಮಾತುಗಳನ್ನಾಡುತ್ತಿದ್ದಾರೆ. ಸಂವಿಧಾನ ಉಳಿಯಬೇಕೆಂದರೆ ಬಿಜೆಪಿಯನ್ನು ಸೋಲಿಸಬೇಕೆಂದು ಕರೆ ನೀಡಿದರು.