ಕೆಜಿಎಫ್: ಕೋಲಾರ ಚಿನ್ನದ ಗಣಿ ಪ್ರದೇಶದ ಚಾಂಫೀಯನ್‌ರೀಫ್ಸ್ನಲ್ಲಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಭಾರತದ ಸಂವಿಧಾನ ದಿನಾಚರಣೆಯನ್ನು ಪ್ರತಿಜ್ಞಾವಿಧಿ ಸ್ವೀಕಾರದ ಮೂಲಕ ಆಚರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅಧ್ಯಕ್ಷತೆಯಲ್ಲಿ ನಡೆದ ಭಾರತದ ಸಂವಿಧಾನ ದಿನಾಚರಣೆಯ ಪ್ರತಿಜ್ಞಾ ವಿಧಿಯ ಸ್ವೀಕಾರ ಕಾರ್ಯಕ್ರಮದಲ್ಲಿ, ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ, ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ ೧೯೪೯ನೆಯ ಇಸವಿಯ ನವೆಂಬರ್ ೨೬ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ.
ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇದ ಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ಸಹ ಪ್ರತಿಜ್ಞೆ ಮಾಡಲಾಯಿತು.
ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಡಿವೈಎಸ್ಪಿ ಬಿ.ಕೆ.ಉಮೇಶ್, ಪೊಲೀಸ್ ಇನ್ಸ್ಪೆಕ್ಟರ್ ಜಿ.ಪಿ. ರಾಜು, ಸೇರಿದಂತೆ ಜಿಲ್ಲೆಯ ಪಿಎಸ್‌ಐಗಳು, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು. ಚಂಡಮಾರುತ ಮಳೆಯಿಂದಾಗಿ ಪ್ರತಿಜ್ಞಾ ವಿಧಿಯ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಕಛೇರಿಯ ಒಳಾಂಗಣದಲ್ಲಿ ಮಾಡಲಾಯಿತು.