ಕಾರ್ಮಿಕ ಕಲ್ಯಾಣ ನಿಧಿಯಿಂದ ಸಾಲಕ್ಕೆ ಸಂಚು

ಕಾರ್ಮಿಕ ಕಲ್ಯಾಣ ನಿಧಿಯಿಂದ ಸಾಲಕ್ಕೆ ಸಂಚು

ಬೆಂಗಳೂರು, . 14: ರಾಜ್ಯದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಕಲ್ಯಾಣ ಹಾಗೂ ಸಾಮಾಜಿಕ ಭದ್ರತೆಗಾಗಿ ರೂಪಿಸಲಾಗಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಡಿ ಸಂಗ್ರಹವಾಗಿರುವ 8 ಸಾವಿರ ಕೋಟಿ ರೂ. ಸರ್ಕಾರಗಳ ಪಾಲಿಗೆ ಕಷ್ಟ ಕಾಲದಲ್ಲಿ ತಕ್ಷಣಕ್ಕೆ ಸಂಪನ್ಮೂಲ ಹೊಂದಿಸುವ ಖಜಾನೆ ಆದಂತಿದೆ.

ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ತಕ್ಷಣಕ್ಕೆ ಬಳಸಿಕೊಳ್ಳುವ ರಾಜ್ಯ ಸರ್ಕಾರದ ಆಲೋಚನೆಗೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ನಿಧಿಯ 3 ಸಾವಿರ ಕೋಟಿ ರೂ. ಹಣವನ್ನು ಸಾಲ ರೂಪದಲ್ಲಿ ಪಡೆದು ನೆರೆ ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರಕ್ಕಾಗಿ ವಿನಿಯೋಗಿಸಲು ಪ್ರಸ್ತಾವನೆಯೊಂದು ಸರ್ಕಾರದ ಮಟ್ಟದಲ್ಲಿ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಎಲ್ಲೂ ಅದಕ್ಕೆ ಅವಕಾಶವಿಲ್ಲ. ಇದಕ್ಕೆಲ್ಲ ಅವಕಾಶ ನೀಡುವುದಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಹೇಳುತ್ತಿದ್ದರೆ, ಈ ಮಧ್ಯೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕಾರ್ಮಿಕ ಇಲಾಖೆ ಹೇಳುತ್ತಿದೆ.  ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಕಾಯ್ದೆಗಳಿಗೆ ತಕ್ಷಣಕ್ಕೆ ಸಂಪನ್ಮೂಲ ಹೊಂದಿಸಿಕೊಳ್ಳಲು ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಮೇಲೆ ಕಣ್ಣು ಬಿದ್ದಿತ್ತು.  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಇನ್ನಿತರ ಕಲ್ಯಾಣ ಕಾರ್ಯಕ್ರಮ ಅನುಷ್ಟಾನ ಮಾಡಲು ಕರ್ಮಿಕ ಕಲ್ಯಾಣ ನಿಧಿ ಬಳಕೆಗೆ ಮುಂದಾಗಿ ನಂತರ ಹಿಂದೆ ಸರಿದಿತ್ತು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಯೋಜನೆಗೂ ಇದೇ ನಿಧಿಯ ಹಣ ಬಳಕೆಗೆ ಚಿಂತನೆ ನಡೆದಿತ್ತು. ಉತ್ತರ ಕರ್ನಾಟಕ ಸೇರಿ ಮಲೆನಾಡು, ಕರಾವಳಿ ಭಾಗದಲ್ಲಿ ಉಂಟಾದ ಪ್ರವಾಹದಿಂದಾಗಿ 36 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವಾಗಿ 1,200 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದಿಂದ ಈವರೆಗೆ 3,100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ತುರ್ತು ಹಣದ ಅವಶ್ಯಕತೆ ಇರುವುದರಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ೩ ಸಾವಿರ ಕೋಟಿ ಹಾಗೂ ಗಣಿ ಬಾಧಿತ ಪ್ರದೇಶಗಳ ಪುನರ್ವಸತಿ ನಿಧಿಯ 2 ಸಾವಿರ ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳುವ ಪ್ರಸ್ತಾವನೆಯಿದೆ ಎಂದು ಹೇಳಲಾಗುತ್ತಿದೆ.

2007 ರಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಅಸ್ತಿತ್ವಕ್ಕೆ ಬಂದಿತ್ತು. ಇದಕ್ಕಾಗಿ “ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಹಾಗೂ ಸಾಮಾಜಿಕ ಭದ್ರತಾ ಮಂಡಳಿ’ ರಚಿಸಲಾಗಿದೆ. ಅಂದಿನಿಂದ 2019 ರ ಸೆಪ್ಟೆಂಬರ್‌ವರೆಗೆ ಬರೊಬ್ಬರಿ 8,358 ಕೋಟಿ ರೂ. ನಿಧಿ ಸಂಗ್ರಹವಾಗಿದೆ. ಇಲ್ಲಿವರೆಗೆ 21 ಲಕ್ಷ ಕಟ್ಟಡ ಕಾರ್ಮಿಕರು ನೊಂದಾಯಿಸಿಕೊಂಡಿದ್ದಾರೆ.

ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡು ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಬೇಕೆಂಬ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ. ಸುಪ್ರೀಂಕೋರ್ಟ್ ನಿರ್ದೇಶನ ಮತ್ತು ಕಾಯ್ದೆಗೆ ವಿರುದ್ಧವಾಗಿದೆ. ಕಾರ್ಮಿಕ ಸಂಘಟನೆಗಳು ಅವಕಾಶ ನೀಡುವುದಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos