ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೊಸ ತಿರುವ ಪಡೆಯುತ್ತಿದ್ದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಧ್ಯ ಟಿಕೆಟ್ಗೆ ಸಂಬಂಧಿಸಿದಂತೆ ಭಾರಿ ಪೈಪೋಟಿ ನಡೆಯುತ್ತಿದ್ದು ಇದರ ನಡುವೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾನೇ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಘೋಷಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿಉಪಚುನಾವಣೆಗೆ ಬಿ ಫಾರ್ಮ್ ಕೊಡೋನು ನಾನೇ, ಅದರ ಮೇಲೆ ಸಹಿ ಮಾಡೋನು ನಾನೇ ಮತ್ತು ಸ್ಪರ್ಧೆಗಿಳಿಯುವವನು ಸಹ ನಾನೇ, ಇದನ್ನು ಆನ್ ರೆಕಾರ್ಡ್ ಹೇಳುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
ಚನ್ನಪಟ್ಟಣದ ಅಭ್ಯರ್ಥಿ ನಾನೇ. ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ನನಗೆ ಮತ ಹಾಕಿದಂತೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಪುನರುಚ್ಚರಿಸಿದರು. ಇದನ್ನೂ ಓದಿ: ಎಚ್ ಡಿ ರೇವಣ್ಣಗೆ ಮಧ್ಯಂತರ ರಿಲೀಫ್
ಎರಡು ವಿರೋಧ ಪಕ್ಷಗಳು ಒಂದಾಗಿವೆ. ಒಂದು, ಎರಡು, ಮೂರಾದರೂ ಆಗಲಿ ನಮಗೆ ಅದು ಸಂಬಂಧವಿಲ್ಲ. ನಾವು ಜನಸೇವೆ ಮಾಡುತ್ತೇವೆ, ಅದರ ಮೇಲೆ ಮಿಕ್ಕಿದ್ದನ್ನು ಜನರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಹೇಳಿದರು.
ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎನ್ನುವ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತು ಮಾತನಾಡಿ, ನನಗೆ ನಿಮ್ಮಗಳ (ಮಾಧ್ಯಮ) ಮಾತಿನ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು.
ಸೇವೆ ಮಾಡಲು ನಮಗೆ ಅಧಿಕಾರ, ಅವಕಾಶ ನೀಡಿದ್ದಾರೆ. ನಾವು ನಮ್ಮ ಅಧಿಕಾರ ಬಳಸಿಕೊಂಡು ಜನರಿಗಾಗಿ ಯಾವ ರೀತಿ ಒಳ್ಳೆಯದು ಮಾಡಬೇಕು ಎಂಬುದು ನಮ್ಮ ಸರ್ಕಾರದ ಚಿಂತನೆ. ಗುರುವಾರ ಎತ್ತಿನಹೊಳೆ ಯೋಜನೆ ಪರೀಕ್ಷಾರ್ಥ ಕಾರ್ಯಾಚರಣೆ ವೀಕ್ಷಣೆಗೆ ಹೋಗಿದ್ದೆ. ಕೆಲವರು ಮೂಗು, ಬಾಯಿ, ಕಿವಿ ಕತ್ತರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ಆದರೆ ನಾನು ಏತ ಕಾಮಗಾರಿ ಪರೀಕ್ಷಾರ್ಥ ಕಾರ್ಯಾಚರಣೆ ಚಾಲನೆ ನೀಡಿದ್ದು, ಸಧ್ಯದಲ್ಲೇ ಶುಭ ಮುಹೂರ್ತ ನೋಡಿ ಉದ್ಘಾಟನಾ ದಿನಾಂಕ ನಿಗದಿ ಮಾಡಲಿದ್ದೇವೆ. ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ಇದು ನಮ್ಮ ಕೆಲಸದ ವೈಖರಿ” ಎಂದರು.