ಬೆಂಗಳೂರು, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅವರ ಲಾಭಕ್ಕೆ ಮಾಡಿಕೊಂಡಿದ್ದಾರೆ ಅಷ್ಟೇ. ಈ ರಾಜಕೀಯ ಪಕ್ಷಗಳಿಗೆ ಯಾವುದೇ ಸಿದ್ಧಾಂತ ಇಲ್ಲ ಅಂತಾ ಕಿಡಿಕಾರಿದ್ದಾರೆ.
ಪ್ರೆಸ್ ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ನವರು ಸೆಕ್ಯುಲರ್ ಅಂದಾಕ್ಷಣ ನಾವು ಅವರನ್ನು ನಂಬಬೇಕಾ? ಬಿಜೆಪಿಗೆ ಮಾತ್ರ ಯಾಕೆ ಬೈಬೇಕು. ನಾನು ಹಿಂದೂ ವಿರೋಧಿಯೂ ಅಲ್ಲ, ಮುಸ್ಲಿಂ ವಿರೋಧಿಯೂ ಅಲ್ಲ. ಇನ್ನೂ 15 ವರ್ಷ ರಾಜಕೀಯದಲ್ಲೇ ಇರುತ್ತೇನೆ ಎಂದರು.
4 ತಿಂಗಳ ಹಿಂದೆ ಚುನಾವಣಾ ರಾಜಕೀಯ ಬೇಡ ಅಂದುಕೊಂಡಿದ್ದೆ. ಆದರೆ, ಗೌರಿ ಲಂಕೇಶ್ ಹತ್ಯೆಯ ಕಾರಣಕ್ಕೆ ರಾಜಕೀಯ ಪ್ರವೇಶ ಮಾಡಬೇಕಾಯಿತು. ಗೌರಿ ಹತ್ಯೆ ನನಗೆ ತುಂಬಾ ನೋವಿದೆ. ಕಳೆದ 5 ವರ್ಷದಲ್ಲಿ ಯಾವುದೇ ವಿಚಾರವನ್ನು ಪ್ರಶ್ನಿಸೋದು ಕಷ್ಟ ಅನ್ನುವ ಸನ್ನಿವೇಶ ಇದೆ.
ಚುನಾವಣೆ ಅನ್ನೋದು ಇವೆಂಟ್ ಆಗಿದೆ. ದೇಶಕ್ಕೆ ಪರ್ಯಾಯ ರಾಜಕಾರಣ ಬೇಕಾಗಿದೆ. ಒಂದು ಪಕ್ಷ ಇನ್ನೊಂದು ಪಕ್ಷಕ್ಕೆ ಪರ್ಯಾಯ ಅಲ್ಲ. ಜಾತಿ, ಹಣದ ಲೆಕ್ಕಾಚಾರದಲ್ಲಿ ಚುನಾವಣೆ ನಡೀತಾ ಇದೆ. ಬಡಜನ, ಸ್ಲಂ ಜನರ ವೋಟನ್ನ ಹಣದಿಂದ ಖರೀದಿಸಿ ಗೆಲ್ಲುವ ರಾಜಕಾರಣ ನಡೀತಾ ಇದೆ. ಇಲ್ಲಿ ವರ್ಚಸ್ಸಿರುವ ವ್ಯಕ್ತಿ ಗೆಲ್ಲುತ್ತಿಲ್ಲ. ಪರ್ಯಾಯ ರಾಜಕಾರಣಕ್ಕೆ ಕರ್ನಾಟಕ ಸಿದ್ಧವಾಗಿದೆ ಎಂದರು.