ಬೆಂಗಳೂರು, ಜು. 29: ರಾಜ್ಯದ ರಾಜ್ಯಕೀಯದಲ್ಲಿ ಮೈತ್ರಿ ಸರ್ಕಾರ ಉರುಳಿದೆ. ಆದರೆ, ಇದರ ಬೆನ್ನಿಗೆ ಹುಟ್ಟಿದ ಮಹತ್ವದ ಪ್ರಶ್ನೆ ಎಂದರೆ ಈ ಮೈತ್ರಿ ಉಳಿಯುತ್ತಾ? ಕಾಂಗ್ರೆಸ್-ಜೆಡಿಎಸ್ ಮತ್ತೆ ಒಟ್ಟಾಗಿಯೇ ಬಿಜೆಪಿ ವಿರುದ್ಧ ಹೋರಾಡುತ್ತಾ? ಎಂಬ ಪ್ರಶ್ನೆ. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದು ಸಂಜೆ ಉತ್ತರ ಸಿಗಲಿದೆ.
ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಶಾಸಕರಿಗೆ ತಕ್ಕ ಪಾಠ ಕಲಿಸಲು ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡ ಸಾಕಷ್ಟು ರಣತಂತ್ರಗಳನ್ನು ಹೆಣೆದಿದ್ದಾರೆ. ಅಲ್ಲದೆ, ಈ ಹಿಂದೆ ಹೇಳಿಕೆ ನೀಡಿದ್ದ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಸಹ ಮೈತ್ರಿ ನಿರ್ಧಾರ ಕೇಂದ್ರ ನಾಯಕರದ್ದು. ಹೀಗಾಗಿ ಈವರೆಗೆ ಕಾಂಗ್ರೆಸ್ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ನಾವು ಮುರಿದಿಲ್ಲ, ಮುರಿಯುವ ಪ್ರಶ್ನೆಯೂ ಇಲ್ಲ ಎಂದು ತಿಳಿಸಿದ್ದರು.
ಹೀಗಿದ್ದೂ ಸಹ ಈವರೆಗೆ ಕಾಂಗ್ರೆಸ್ ನಾಯಕರಾಗಲಿ, ಜೆಡಿಎಸ್ ನಾಯಕರಾಗಲಿ ಮೈತ್ರಿ ಮುರಿಯುವ ಅಥವಾ ಮುಂದುವರಿಯುವ ಬಗ್ಗೆ ಎಲ್ಲೂ ಬಹಿರಂಗವಾಗಿ ಸ್ಪಷ್ಟ ಹೇಳಿಕೆ ನೀಡಿರಲಿಲ್ಲ. ಇದೇ ಕಾರಣಕ್ಕೆ ಮೈತ್ರಿಯ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಆದರೆ, ಈ ಎಲ್ಲಾ ಗೊಂದಲಗಳಿಗೆ ಇಂದು ತೆರೆ ಬೀಳಲಿದೆ.