ಗದಗ, ಜ.07: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಮಾಡುವವರಿಗೆ ಬಹಿರಂಗವಾಗಿ ಜೀವ ಬೇದರಿಕೆ ಹಾಕಿ ಎಚ್ಚರಿಕೆ ನೀಡಿರುವ ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ವಿರುದ್ಧ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡಿರುವ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಭಾನುವಾರ ಗದಗ ಬೆಟಗೇರಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಪ್ರತಿಭಟನೆ ನಡೆಸಿದೆ
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅವರ ಪ್ರತಿಕೃತಿ ದಹಿಸಿ ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯ ಇಂದಿನವರೆಗೂ ಸಹೋದರತ್ವ ಬಾಂಧವ್ಯವನ್ನು ಹೊಂದಿವೆ ಆದರೆ ಶಾಸಕ ಸೋಮಶೇಖರ ರೆಡ್ಡಿ ಸಮಾಜದ ಸ್ವಾಸ್ಥ ಮತ್ತು ಶಾಂತಿಗೆ ಭಂಗ ತರುವ ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ ಕೂಡಲೇ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ನಾಡಿನಲ್ಲಿ ಜಾತಿ ಧರ್ಮದ ವಿಷ ಬೀಜ ಬಿತ್ತುತ್ತಿರುವ ಶಾಸಕರ ಮೇಲೆ ಕಠಿಣ ಕ್ರಮ ಕೈಗೊಂಡು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸೋಮಶೇಖರರೆಡ್ಡಿ ವಿರುದ್ಧ ಕ್ರಮಕೈಗೊಳ್ಳದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ನಂತರ ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಅಧ್ಯಕ್ಷ ಮಹ್ಮದ್ ಯೂಸೂಫ್ ನಮಾಜಿ, ಉಪಾಧ್ಯಕ್ಷ ಬಾಬಾಜಾನ್, ಇಲಿಯಾಸ್ ಕೈರಾತಿ, ಮುಜಫರ್ ಮುಲ್ಲಾ, ಮೆಹಬೂಬ ಧಾರವಾಡ, ಎಂ.ಡಿ. ಮಾಳಿಕೊಪ್ಪ, ವಿನೋದ ಶಿದ್ಲಿಂಗ, ಮಹ್ಮದಸಾಬ ಮುಲ್ಲಾ, ಶಾಬಾಜ್ ಮುಲ್ಲಾ, ಮಕ್ತುಂ ಮುಲ್ಲಾ, ರಿಯಾಜ್ ಪಾಮಡಿ, ಮಲ್ಲಿಕ್ ಹಂಪಾಪಟ್ಟಣ, ನಿಜಾಮುದ್ದಿನ ಕಾತರಕಿ, ಅನ್ವರ್ ಬಾಗೇವಾಡಿ ಸೇರಿದಂತೆ ಮತ್ತಿತರರು ಇದ್ದರು.