ನವದೆಹಲಿ, ಡಿ. 19: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭವಾಗಿರುವ ಪ್ರತಿಭಟನೆಯ ಕಾವು ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಇಂದೂ ಸಹ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು ದೆಹಲಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ 13 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ.
ಅಧಿಕ ವಾಹನ ಸಂದಣಿ ಹೊಂದಿರುವ ದೆಹಲಿಯಲ್ಲಿ ಮೆಟ್ರೋ ಸಂಚಾರ ಪ್ರಯಾಣಿಕರ ಜೀವನಾಡಿ. ಪ್ರತಿದಿನ ಲಕ್ಷಾಂತರ ಜನ ಮೆಟ್ರೋ ಸೇವೆಯನ್ನು ಅವಲಂಭಿಸಿದ್ದಾರೆ. ಆದರೆ, ಪೌರತ್ವ ಕಾಯ್ದೆ ವಿರೋಧಿ ಹೋರಾಟ ಹಿಂಸಾರೂಪ ಪಡೆಯುವ ಸಾಧ್ಯತೆಯನ್ನು ಅರಿತ ದೆಹಲಿ ಮೆಟ್ರೋ ಆಡಳಿತ ಮಂಡಳಿ ಇಂದು ನಗರದ ಪ್ರಮುಖ 13 ಮೆಟ್ರೋ ನಿಲ್ದಾಣವನ್ನು ರಾತ್ರಿ 12 ಗಂಟೆಯವರೆಗೆ ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಜನ ಟ್ರಾಫಿಕ್ ಕಿರಿಕಿರಿಯನ್ನೂ ಅನುಭವಿಸುವಂತಾಗಿದೆ.