ನವದೆಹಲಿ, ಮಾ.13, ನ್ಯೂಸ್ ಎಕ್ಸ್ ಪ್ರೆಸ್: ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ನಾಯಕಿ ಶೆಹ್ಲಾ ರಶೀದ್ ಶೋರಾ ಅವರು ಸಕ್ರಿಯ ರಾಜಕೀಯ ಎಂಟ್ರಿ ಕೊಡುತ್ತಿರುವುದಾಗಿ ಘೋಷಿಸಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ ಶಾಹ್ ಫೈಝಲ್ ಅವರು ಸ್ಥಾಪಿಸಲಿರುವ ಹೊಸ ಪಕ್ಷದ ಮೂಲಕ ಶೆಹ್ಲಾ ಅವರು ಲೋಕಸಭೆ ಚುನಾವಣೆ ಸ್ಪರ್ಧಿಸಲಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿವೆ.
ಪ್ರತಿಭಾವಂತ ಕಾಶ್ಮೀರಿ ಫೈಝಲ್ ಅವರ ಪಕ್ಷದಲ್ಲಿ ಶೆಹ್ಲಾ ಅವರಿಗೆ ಪ್ರಮುಖ ಸ್ಥಾನ ಸಿಗಲಿದೆ. ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ರೂಪುರೇಷೆ ಬಗ್ಗೆ ಭಾರಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. 31 ವರ್ಷ ವಯಸ್ಸಿನ ರಶೀದ್ ಅವರು ಜವಹಾರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಉಪಾಧ್ಯಕ್ಷೆಯಾಗಿದ್ದಾರೆ. ಸದ್ಯ ತಂತ್ರಜ್ಞಾನ ಹಾಗೂ ಸಿಟಿಜನ್ -ಸ್ಟೇಟ್ ಸಂಬಂಧ ಕುರಿತ ಪಠ್ಯ ವಿಷಯದ ಮೇಲೆ ಪಿಎಚ್ ಡಿ ಮಾಡುತ್ತಿದ್ದಾರೆ.
2016ರ ಫೆಬ್ರವರಿಯಲ್ಲಿ ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ನೇಣು ಶಿಕ್ಷೆ ವಿರೋಧಿಸಿ ಜೆಎನ್ ಯು ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬಾನ್ ಭಟ್ಟಾಚಾರ್ಯ ಅವರು ಬಂಧನರಾದ ಬಳಿಕ ರಶೀದ್ ಬೆಳಕಿಗೆ ಬಂದರು. ದೇಶದ್ರೋಹಿದ ಆರೋಪದ ಮೇಲೆ ಮೂವರು ಬಂಧನಕ್ಕೊಳಗಾದಾಗ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ, ಪ್ರತಿಭಟನೆಯನ್ನು ಶೆಹ್ಲಾ ಮುಂದುವರೆಸಿದ್ದರು.