ಬೆಂಗಳೂರು, ಡಿ.16 : ಇಂದಿರಾ ಕ್ಯಾಂಟಿನಿಂದ ಅನ್ನವನ್ನು ಚರಂಡಿಗೆ ಚಲ್ಲಲಾಗುತ್ತಿದೆ. ಜಾನುವಾರು ಹಾಗೂ ನಾಯಿಗಳು ಮುತ್ತಿಕೊಂಡಿರುತ್ತವೆ. ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಕೋಟಿ ಕೋಟಿ ರೂ. ಲೂಟಿಯಾಗುತ್ತಿದ್ದು, ಬಡವರ ಹೊಟ್ಟೆ ತುಂಬಿಸಬೇಕಾದ ಕೆಜಿ ಗಟ್ಟಲೆ ಆಹಾರ ವ್ಯರ್ಥವಾಗುತ್ತಿದೆ.
ನಗರದ ಮೆಜೆಸ್ಟಿಕ್, ಮಾರುಕಟ್ಟೆ, ಚಿಕ್ಕಪೇಟೆ, ಶ್ರೀರಾಮಪುರ ಹೀಗೆ ಜನನಿಬಿಡ ಪ್ರದೇಶಗಳಲ್ಲಿರುವ ಇಂದಿರಾ ಕ್ಯಾಂಟೀನ್ ಬಡವರ ಹಸಿವು ನೀಗಿಸುತ್ತಿದೆ. ಮತ್ತೊಂದೆಡೆ ಸದಾಶಿವನಗರ, ವಿಜಯನಗರ, ಮಲ್ಲೇಶ್ವರಂ, ಜಯನಗರ, ಜೆಪಿನಗರ ಹೀಗೆ ಮನೆಗಳೇ ಹೆಚ್ಚಿರುವ ಜಾಗದಲ್ಲಿ ಗುತ್ತಿಗೆದಾರರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.
ರಾಶಿ ರಾಶಿ ಅನ್ನ ಚರಂಡಿಗೆ : ಮೈತ್ರಿ ಸರ್ಕಾರದ ಮಹತ್ವಾಂಕಾಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಉಳ್ಳವರ ಜೇಬು ಸೇರುತ್ತಿದೆ. ನಗರದ ಎಸ್.ಬಿ.ರೋಡ್ನಲ್ಲಿರುವ ಅಡುಗೆ ಮನೆಯಲ್ಲಿರುವ ನೀಲಿ ಬಣ್ಣದ ಡ್ರಮ್ನಲ್ಲಿ ರಾಶಿ ರಾಶಿ ಅನ್ನ ಚರಂಡಿ ಸೇರುತ್ತಿದೆ. ಈ ದೃಶ್ಯಗಳು ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಸಿಬ್ಬಂದಿಗೆ ಸುಳಿವು ಸಿಕ್ಕೊಡನೆ ಅಡುಗೆ ಮನೆ ಬಾಗಿಲನ್ನು ಸಿಬ್ಬಂದಿ ಹಾಕಿಕೊಂಡರು. ಅಲ್ಲದೇ ತಮ್ಮ ಕಂಪನಿ ವಾಹನ ಬಿಟ್ಟು ಬೇರೆ ಖಾಸಗಿ ವಾಹನದಲ್ಲಿ ಊಟವನ್ನು ಸಾಗಿಸುತ್ತಿದ್ದು, ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಇಂದಿರಾ ಕ್ಯಾಂಟೀನ್ ಮುಂದುವರಿಯುವ ಬಗ್ಗೆ ಹಲವು ಗಾಳಿ ಸುದ್ದಿಗಳು ಹರಿದಾಡುತ್ತಿದೆ. ಈ ಮಧ್ಯೆ ಟೆಂಡರ್ ಅವಧಿ ಮುಗಿದಿದ್ದರೂ ಗುತ್ತಿಗೆದಾರರು ಮಾತ್ರ ಆಹಾರ ಪೂರೈಕೆ ಮುಂದುವರಿಸಿದ್ದಾರೆ. ನಿತ್ಯ ಲಕ್ಷಾಂತರ ಜನ ಇಂದಿರಾ ಕ್ಯಾಂಟೀನ್ ನಂಬಿದ್ದಾರೆ ಎಂದು ಲೆಕ್ಕ ಹೇಳಲಾಗುತ್ತಿದ್ದು, ಲಕ್ಷಾಂತರ ಜನ ಊಟ ಮಾಡುತ್ತಿದ್ದಾರೆ. ರಿಯಾಯಿತಿ ದರದಲ್ಲಿ ಬಡವರಿಗೆ ಊಟ ಸಿಗುತ್ತಿದೆ. ಹಾಗೆಯೇ ಕ್ಯಾಂಟೀನ್ ಹೆಸರು ಕೋಟಿ ಕೋಟಿ ಲೂಟಿ ಮಾಡುವವರೂ ಇದ್ದಾರೆ. ಬಡವರ ಅನ್ನ ಇಂದಿರಾ ಕ್ಯಾಂಟೀನ್ ಎಷ್ಟು ಸತ್ಯವೋ, ಇಂದಿರಾ ಕ್ಯಾಂಟೀನ್ ಉಳ್ಳವರ ಜೇಬು ತುಂಬಿಸುತ್ತಿದೆ ಎಂಬುವುದು ಅಷ್ಟೇ ಸತ್ಯ.