ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಪ್ರತಿಭಟನೆ!?  

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಪ್ರತಿಭಟನೆ!?  

ದೇವನಹಳ್ಳಿ, ಆ. 28: ದೊಡ್ಡ ಬಳ್ಳಾಪುರ ತಾಲೂಕು ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಮತ್ತು ಮಿನಿ ಲಾರಿ ಮಾಲೀಕರು ಮತ್ತು ಚಾಲಕರು ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ಪ್ರಾಂತ ರೈತ ಸಂಘ, ಪ್ರವಾಸಿ ಕಾರು ಚಾಲಕರು ಹಾಗೂ ಮಾಲೀಕರ ಸಂಘ ವತಿಯಿಂದ ಅವೈಜ್ಞಾನಿಕ ದುಬಾರಿ ದಂಡ/ಶಿಕ್ಷೆ ನೀಡುವ ಕೇಂದ್ರ ಮೋಟಾರ್ ವಾಹನ (ತಿದ್ದುಪಡಿ) ಕಾಯ್ದೆ 2019 ವಾಪಾಸ್ಸಾತ್ತಿಗಾಗಿ ಆಗ್ರಹಿಸಿ ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ನಲ್ಲಿರುವ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ – ರಾಜ್ಯ ಸರ್ಕಾರಗಳು ವಾಹನಗಳ ಮಾಲೀಕರು ಉಪಯೋಗಿಸುವ ಪೆಟ್ರೋಲ್/ಡೀಸೆಲ್/ಗ್ಯಾಸ್ ಹಾಗೂ ತೈಲೋತ್ಪನ್ನಗಳಿಂದ ಹಾಗೂ ವಾಹನಗಳ ಬಿಡಿಭಾಗಗಳ ಮೇಲೆ ಸಾವಿರಾರು ಕೋಟ್ಯಾಂತರ ರೂ. ಗಳ ತೆರಿಗೆಯನ್ನು ಸಂಗ್ರಹಿಸುತ್ತಿವೆ. ಅಲ್ಲದೆ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ ಗಳನ್ನು ನಿರ್ಮಿಸಿ ಪ್ರತಿ ವಾಹನಕ್ಕೂ ವಿಪರೀತ ಶುಲ್ಕಗಳನ್ನು ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಎಫ್ ಕೆ ಎಆರ್ ಡಿಯು ತಾಲೂಕು ಅಧ್ಯಕ್ಷ ಪಿ ಎ ವೆಂಕಟೇಶ್ ಮಾತನಾಡಿ ಆಟೋ ಮತ್ತಿತರ ಚಾಲಕರು ಸಾರ್ವಜನಿಕ ಸೇವೆಯಲ್ಲಿ (ಸಾರಿಗೆ) 2ನೇ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸರ್ಕಾರದಿಂದ ಸೌಲಭ್ಯಗಳನ್ನು ನೀಡಿರುವುದಿಲ್ಲ. ಹಲವು ಬಗೆಯಲ್ಲಿ ಸಾವಿರಾರು ಕೋಟಿ ತೆರಿಗೆಗಳನ್ನು ಸಹ ವಸೂಲಿ ಮಾಡಲಾಗುತ್ತಿದೆ. ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿದ್ದು, ಇದರಿಂದ ದುಬಾರಿ ದಂಡಗಳನ್ನು ವಾಹನಗಳ ಮಾಲೀಕರು ತೆರೆಬೇಕಾಗಿರುತ್ತದೆ.

ಪರವಾನಗಿ ಇಲ್ಲದ ವಾಹನ ಚಾಲನೆ 5 ಸಾವಿರ ರೂ. ವೇಗದ ಚಾಲನೆ 2 ಸಾವಿರ ರೂ , ಅಪಾಯಕಾರಿ ಚಾಲನೆ-ರೂ.5000, ಮಧ್ಯಸೇವಿಸಿ ಚಾಲನೆ 10 ಸಾವಿರ ರೂ. ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ದರೆ ಪ್ರತಿ ಪ್ರಯಾಣಿಕನ ಮೇಲೆ 20 ಸಾವಿರ ರೂ. ವಿಮೆ ಇಲ್ಲದ ಚಾಲನೆ 2 ಸಾವಿರ ರೂ. ಮತ್ತು ಮಕ್ಕಳಿಗೆ ವಾಹನ ನೀಡಿದ್ದಲ್ಲಿ 25 ಸಾವಿರ ರೂ. ದಂಡ ಹಾಗು 3 ವರ್ಷ ಜೈಲು. ಸಣ್ಣ ತಪ್ಪಿಗೂ ದುಬಾರಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಈ ಕಾಯ್ದೆಯನ್ನು ನಾವು ವಿರೋಧಿಸೋಣ. ಸಂಚಾರ ಉಲ್ಲಂಘನೆಗಳಿಗೆ ರೂಪಿಸಿರುವ ದಂಡನೆಯ ಅಂಶಗಳು ಐಪಿಸಿ (ಭಾರತ ದಂಡ ಸಂಹಿತೆ) ವಿಧಿಸಿರುವ ಅಂಶಗಳಿಗೆ ಸಂಪೂರ್ಣ ವಿರುದ್ಧವಾಗಿದೆ.  ಈ ಕಾಯ್ದೆಯ ಪ್ರಕಾರ ರಸ್ತೆಯಲ್ಲಿ ಸಂಭವಿಸುವ ಅಪಘಾತಗಳಿಗೆ ಚಾಲಕರೇ ಹೊಣೆ ಎಂದು ಕಾಯ್ದೆ ಪರಿಗಣಿಸುತ್ತದೆ. ಎಲ್ಲಾ ಅಪಘಾತಗಳಿಗೆ ಚಾಲಕರೇ ಹೊಣೆಯೇ? ದಂಡನೆಯ ಕ್ರಮಗಳು ಅಸಾಮಾನ್ಯವಾಗಿವೆ ಎಂದರು.

ಎ ಆರ್ ಡಿಯು ಗೌರವಾಧ್ಯಕ್ಷ  ಆರ್ ಚಂದ್ರ ತೇಜಸ್ವಿ ಮಾತನಾಡಿ ಈ ಕರಾಳ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಕಾರ್ಮಿಕ ಸಂಘಗಳ ಐಕ್ಯ ವೇದಿಕೆಯ ಕರೆಯ ಮೇರೆಗೆ ಏಪ್ರಿಲ್ 30, 2015 ರಂದು, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರಸ್ತೆ ಸಾರಿಗೆ ಕಾರ್ಮಿಕರ ಒಂದು ಯಶಸ್ವಿ ರಾಷ್ಟ್ರೀಯ ಮುಷ್ಕರ ನಡೆಯಿತು. ಸಾರ್ವಜನಿಕ ಹಿತಕ್ಕೆ ವಿರುದ್ಧವಾದ, ಕಾರ್ಮಿಕ-ವಿರೋಧಿಯಾದ ಮತ್ತು ಸಾರಿಗೆ ವಲಯದ ಪ್ರಮುಖ ಭಾಗವನ್ನು ಖಾಸಗೀಕರಿಸಿ ಕಾಪ್ರೋರೇಟ್ ವಲಯಕ್ಕೆ ಹಸ್ತಾಂತರಿಸುವ ಗುರಿಯಿದೆ. ಭಾರತದ ಪ್ರಧಾನ ಮಂತ್ರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದರು. ಸಹ ಸ್ಪಂದನೆ ದೊರೆಯಲಿಲ್ಲ. ಆದ್ದರಿಂದ ಈ ಖಾಸಗೀಕರಣ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು. ಈ ಕಾಯ್ದೆಯ ಎಲ್ಲಾ ಅಂಶಗಳನ್ನು ಜಾರಿಗೊಳಿಸಿದರೆ ಲಕ್ಷಾಂತರ ಸಾರಿಗೆ ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ಹಲವು ವಾಹನಗಳನ್ನು ರಸ್ತೆಗಿಳಿಯಲು ಸಾಧ್ಯವಾಗುವುದಿಲ್ಲ.  ದೇಶದಲ್ಲಿ 7.5 ಲಕ್ಷ ಖಾಯಂ ನೌಕರರು ಮತ್ತು 2.5 ಲಕ್ಷ ತಾತ್ಕಾಲಿಕ ನೌಕರರಿಗೆ ಉದ್ಯೋಗ ಕೊಟ್ಟಿರುವ 53 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಮುಚ್ಚಬೇಕಾಗುವುದು. ಭಾರತದ ರಸ್ತೆ ಸಾರಿಗೆ ಉದ್ದಿಮೆಯ ಪ್ರಮುಖ ಭಾಗದಲ್ಲಿ 90 ಶೇ. ಕಾರ್ಮಿಕರು ಖಾಸಗೀ ವಲಯದಲ್ಲಿ ಇದ್ದಾರೆ. ಅವರಿಗೆ ಯಾವುದೇ ರೀತಿಯ ಸೇವಾ ನಿಯಮಗಳಾಗಲೀ, ವೈದ್ಯಕೀಯ ಸವಲತ್ತುಗಳಾಗಲಿ, ಭವಿಷ್ಯ ನಿಧಿ, ಪೆನ್ಷನ್, ಗ್ರಾಚ್ಯುಟಿ ಮುಂತಾದ ಸಾಮಾಜಿಕ ಭದ್ರತಾ ಸೌಲಭ್ಯಗಳು ಇಲ್ಲ.  15 ವರ್ಷಗಳ ಹಳೆಯ ಆಟೋ ಮತ್ತು ಇತರ ವಾಹನಗಳನ್ನು ರದ್ದುಪಡಿಸುವುತ್ತಿರುವುದರಿಂದ ಚಾಲಕರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಹೊಸ ವಾಹನಗಳನ್ನು ಖರೀದಿಸುವ ಸರ್ಕಾರ ಸಹಾಯ ಮಾಡಬೇಕು. ಆಟೋ ಮತ್ತು ಇತರ ವಾಹನಗಳಿಗೆ ಸಾಲ ನೀಡುವ ಖಾಸಗೀ ಹಣಕಾಸು ಸಂಸ್ಥೆಗಳನ್ನು ನಿಯಂತ್ರಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳು, ಡಿ. ದೇವರಾಜು ಅರಸು ಅಭಿವೃದ್ಧಿ ನಿಗಮ/ಅಂಬೇಡ್ಕರ್ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ಸಾಲ ಸೌಲಭ್ಯವನ್ನು ಒದಗಿಸಬೇಕು. ಆಟೋ ಮತ್ತು ಇತರ ಬಡ ಚಾಲಕರಿಗೆ ಪ್ರತ್ಯೇಕ ವಸತಿ ಯೋಜನೆಗಳನ್ನು ರೂಪಿಸಬೇಕು. ಆಟೋ ಮತ್ತು ಇತರ ವಾಹನಗಳಿಗೆ ಸೂಕ್ತ ಆಧುನಿಕ ನಿಲ್ದಾಣಗಳನ್ನು ಅಗತ್ಯವಿರುವಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos