ನರೇಗಲ್ಲ, ಜೂ. 29 : ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದ ಘಟನೆ ನಿಡಗುಂದಿ ಗ್ರಾಮದ ಬಳಿ ನಡೆದಿದೆ. ಗದಗದಿಂದ ಗಜೇಂದ್ರಗಡ ಮಾರ್ಗವಾಗಿ ಚಲಿಸುತ್ತಿದ್ದ ಕಾರು ನಿಡಗುಂದಿ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದ ಹತ್ತಿರದ ಮಧ್ಯದ ಹಳ್ಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ಚಾಲಕ ಬೆಳಗಾವಿಯ ಸಿದ್ದಪ್ಪ ಕೋಟಿ, ಹುಬ್ಬಳ್ಳಿಯ ಮಹ್ಮದ್ಸಾಕ್ ಡಾಲಾಯತ, ಸೂಗನಹಳ್ಳಿಯ ಫಕೀರೇಶ ಬಡ್ನಿಗೆ ಗಾಯಗಳಾಗಿವೆ. ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರರು ಕಾರಿನಲ್ಲಿದ್ದ ಗಾಯಾಳುಗಳನ್ನು ಹೊರತೆಗೆದು ರಕ್ಷಣೆ ಮಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ನೆರವಾಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ನರೇಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಡೆ ಗೋಡೆ ಒತ್ತಾಯ : ನಿಡಗುಂದಿ ಗ್ರಾಮದ ಹೊರ ವಲಯದಲ್ಲಿನ ಶ್ರೀಶರಣ ಬಸವೇಶ್ವರ ದೇವಸ್ಥಾನದ ಹತ್ತಿರದ ಹಳ್ಳಕ್ಕ ತಡೆಗೊಡೆ ಇಲ್ಲದಿರುವುದರಿಂದ, ಇಲ್ಲಿ ಅನೇಕ ಅಪಘಾತಗಳಾಗಿವೆ. ಹಳ್ಳ ಇರುವ ಬಗ್ಗೆ ಮಾಹಿತಿ ಫಲಕ ಹಾಕಬೇಕು. ಈ ಹಿಂದೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಲವಾರು ಮನವಿ ಮಾಡಿದರೂ ತಡೆ ಗೋಡೆ ನಿರ್ವಿುಸಿಲ್ಲ.