ಬೆಂಗಳೂರು, ಡಿ. 22 : ‘ಕಾಂಕ್ರೀಟ್ ಕಾಡು’ ಬೆಂಗಳೂರು ನಗರದಲ್ಲಿ ಹಸುಗಳಿಗೆ ತಿನ್ನಲು ಹುಲ್ಲು ಸಿಗದೆ, ಜನರು ಬಿಸಾಡುವ ಪ್ಲಾಸ್ಟಿಕ್ಯುುಕ್ತ ಕಸವನ್ನೇ ತಿಂದು ವಿಷಯುಕ್ತ ಹಾಲು ನೀಡುತ್ತಿವೆ!
ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಸುಂಕದಕಟ್ಟೆ, ಚಿಕ್ಕಪೇಟೆ, ಪಾದರಾಯನಪುರ, ಗೌರಿಪಾಳ್ಯ ಸೇರಿ ಹಳೆಯ ಬೆಂಗಳೂರು ಪ್ರದೇಶಗಳ ಜನರು ಬದುಕಿಗೆ ಹೈನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಆದರೆ ಅವುಗಳಿಗೆ ಸೂಕ್ತ ಆಹಾರ ನೀಡದಿರುವುದರಿಂದ ಹಸುಗಳು ಬೀದಿಯಲ್ಲಿನ ಕಸ, ಕಡ್ಡಿ, ಪ್ಲಾಸ್ಟಿಕ್ನಲ್ಲಿ ಕಟ್ಟಿ ಎಸೆಯುವ ಮನೆಗಳ ಆಹಾರ, ಮಾರುಕಟ್ಟೆಗಳ ತ್ಯಾಜ್ಯವನ್ನು ಸೇವಿಸುವುದನ್ನು ರೂಢಿಸಿಕೊಂಡಿವೆ.
ಪ್ಲಾಸ್ಟಿಕ್ ನಿಷೇಧ ಮಾಡಿ ವರ್ಷಗಳೇ ಕಳೆದಿವೆ. ಆದರೆ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವಲ್ಲಿ ಇದುವರೆಗೂ ಶೇ.20 ಯಶಸ್ಸು ಲಭಿಸಿಲ್ಲ. ನಗರದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಕಸದಲ್ಲಿ ಶೇ.30ರಿಂದ ಶೇ.40 ಪ್ಲಾಸ್ಟಿಕ್ ತ್ಯಾಜ್ಯ ಇರುವುದು ಕಂಡುಬಂದಿದೆ. ಮನೆಗಳವರು ಕಸವನ್ನು ಪ್ಲಾಸ್ಟಿಕ್ನಲ್ಲಿ ಕಟ್ಟಿ ರಸ್ತೆಗೆ ಬಿಸಾಡುತ್ತಾರೆ. ಆ ಕಸ ಹಸುಗಳ ಉದರ ಸೇರುತ್ತಿದೆ. ಅಂತಹ ಹಸುಗಳ ಹಾಲು ಸೇವನೆಯಿಂದ ಕೆಮ್ಮು, ಜ್ವರ ಹಾಗೂ ಕ್ಯಾನ್ಸರ್ಕಾರಕ ಕಾಯಿಲೆಗಳು ಬರುವುದು ಹೆಚ್ಚಾಗುತ್ತಿದೆ.