ಬೆಂಗಳೂರು: ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಾಗಾಗಿ ನಮ್ಮ ಹೃದಯದ ಭಾಷೆಯನ್ನು ಎತ್ತಿಹಿಡಿಯುವುದು ಅತಿ ಮುಖ್ಯ. ಇಂದು ಶೇ.60 ರಷ್ಟು ಕನ್ನಡ ಬೋರ್ಡ್ ಹಾಕಲು ಕೊನೆ ದಿನ ವಾಗುತ್ತು. ಆದರೆ ಸರ್ಕಾರ ಈಗ ಈ ಗಡುವನ್ನು ವಿಸ್ತರಿಸಿದೆ.
ಶೇ.60 ರಷ್ಟು ಕನ್ನಡ ಬೋರ್ಡ್ ಹಾಕದ ಅಂಗಡಿಗಳ ಲೈಸೆನ್ಸ್ ರದ್ದು ಮಾಡುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ನಿಗದಿ ಪಡಿಸಿದ್ದ ಗಡುವನ್ನು ವಿಸ್ತರಿಸಲಾಗಿದೆ.
ಡೆಡ್ಲೈನ್ ಮುಕ್ತಾಯ ಹಿನ್ನೆಲೆ ಇಂದು ನಾಮಫಲಕ ಪರಿಶೀಲನೆ ನಡೆಸಲು ಮುಂದಾದ ಪಾಲಿಕೆ ಅಧಿಕಾರಿಗಳು, ಶೇಕಡಾ 60ರಷ್ಟು ಕನ್ನಡ ನಾಮಫಲಕ ಅಳವಡಿಸದಿದ್ದರೆ ಪರವಾನಗಿ ರದ್ದು ಮಾಡಿ ಬೀಗ ಜಡಿಯುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದ ಕಡೆ ಶೇ.60 ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ ಕಾಲ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.