ಬೆಂಗಳೂರು,ಮಾ.22, ನ್ಯೂಸ್ ಎಕ್ಸ್ ಪ್ರೆಸ್: ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಉಪವಿಭಾಗ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 22 ಮಂದಿಯನ್ನು ಬಂಧಿಸಿ 64 ಪ್ರಕರಣಗಳನ್ನು ಪತ್ತೆಹಚ್ಚಿ 61 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, ದ್ವಿಚಕ್ರ, ತ್ರಿಚಕ್ರ ವಾಹನ, ಗಾಂಜಾ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಎಸ್.ಲೇಔಟ್ ಠಾಣೆ ಪೊಲೀಸರು ಅಭಿದಾ(56) ಎಂಬ ಮಹಿಳೆ ಸೇರಿದಂತೆ ಚೇತನ್‍ಕುಮಾರ್, ಪ್ರವೀಣ, ಸಯ್ಯದ್‍ಸಲೀಂ, ನವಾಜ್, ನಯಾಜ್, ಗಿರೀಶ್, ಕಾರ್ತಿಕ್ ಎಂಬುವರನ್ನು ಬಂಧಿಸಿ 28 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳಿಂದ 20.50 ಲಕ್ಷ ರೂ.ಬೆಲೆ ಬಾಳುವ ಸ್ಕಾರ್ಪಿಯೋ ಕಾರು, ಆಟೋ, 25 ದ್ವಿಚಕ್ರ ವಾಹನ, 1.52 ಲಕ್ಷ ನಗದು ಹಾಗೂ ಒಂದು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.