ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-ಬಿಟಿಎಂಸಿಯಲ್ಲಿ ಖಾಲಿ ಇರುವ ನಿರ್ವಾಹಕರು, ಸಹಾಯಕ ಲೆಕ್ಕಿಗ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 2503 ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅರ್ಹ ಅಭ್ಯರ್ಥಿಗಳು ಬಿಎಂಟಿಸಿಯ ಅಧಿಕೃತ ಜಾಲತಾಣ mybmtc.karnataka.gov.in ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಹುದ್ದೆಗಳನ್ನು ಭರ್ತಿ ಮಾಡಲಿದೆ. ಆನ್‌ಲೈನ್‌ನಲ್ಲಿ ಶೀಘ್ರದಲ್ಲಿ ಅರ್ಜಿಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2,500 ನಿರ್ವಾಹಕರ ಹುದ್ದೆ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ. ಮಿಕ್ಕುಳಿದ ವೃಂದದ 2,286 ಹುದ್ದೆಗಳು, ಸ್ಥಳೀಯ ವೃಂದದ 199, 15 ಹಿಂಬಾಕಿ ಹುದ್ದೆ ಸೇರಿ ಒಟ್ಟು 2,500 ಹುದ್ದೆಗಳಿಗೆ ಮಾ.10ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆಯಾಗಿ ದ್ವಿತೀಯ ಪಿಯು ಅಥವಾ ತತ್ಸಮಾನ ತರಗತಿ ಪೂರ್ಣಗೊಳಿಸಿರಬೇಕು. ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ, ಬ್ಯಾಡ್ಜ್ ಹೊಂದಿರಬೇಕು.
ಪುರುಷರು 160 ಸೆ.ಮೀ, ಮಹಿಳೆಯರು 150 ಸೆಂ. ಮೀ ಎತ್ತರವಿರಬೇಕು, ಅಭ್ಯರ್ಥಿಗಳು ಕನಿಷ್ಠ ವಯೋಮಿತಿ 18 ಆಗಿದ್ದು, ಗರಿಷ್ಠ ವಯೋಮಿತಿ 35 ವರ್ಷ ಆಗಿದೆ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ. ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ಹಾಗೂ ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅಭ್ಯರ್ಥಿಗಳ ಒಂದು ವರ್ಷದ ವೃತ್ತಿ ತರಬೇತಿಯಲ್ಲಿ ಮಾಸಿಕ 9,100 ರೂ ಮತ್ತು ವರ್ಷದ ಬಳಿಕ ಎರಡು ವರ್ಷಗಳ ಅವಧಿಗೆ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿ ನೇಮಕವಾದಲ್ಲಿ ಮಾಸಿಕ 18,660- 25,300 ರೂ ವೇತನ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 750 ರೂ ಮತ್ತು ಪ.ಜಾ, ಪ.ಪಂ, ಪ್ರವರ್ಗ 1, ಮಾಜಿ ಸೈನಿಕ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.