ನವದೆಹಲಿ, ಮೇ. 31, ನ್ಯೂಸ್ ಎಕ್ಸ್ ಪ್ರೆಸ್: ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಗೆಲುವು ಸಾಧಿಸಿ ಲೋಕಸಭೆಗೆ ಕಾಲಿಟ್ಟು ಸಚಿವ ಹುದ್ದೆಗೇರಿದ ‘ಅಮಿತ್ ಶಾ’ ಈಗ ಪಕ್ಷದ ಅಧ್ಯಕ್ಷ ಹುದ್ದೆಯನ್ನು ಮಾಜಿ ಸಚಿವ ಜೆ.ಪಿ.ನಡ್ಡಾಗೆ ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ.
ಮೋದಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ನಡ್ಡಾ, ಶಾ ಸಹಕಾರದೊಂದಿಗೆ ಪಕ್ಷವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಜೆಪಿಗೆ ಅತ್ಯಂತ ಮಹತ್ವದ ಮೂರು ರಾಜ್ಯಗಳ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ, ಜಾರ್ಖಂಡ ಮತ್ತು ಹರಿಯಾಣ ಚುನಾವಣೆಯನ್ನು ನಡ್ಡಾ ನಿರ್ವಹಿಸುವ ಸಾಧ್ಯತೆಯಿದೆ.
ಹೀಗಾಗಿಯೇ, ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಶೀಘ್ರದಲ್ಲಿಯೇ ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ನೇತೃತ್ವವನ್ನೂ ನಡ್ಡಾ ವಹಿಸಬೇಕಿರುತ್ತದೆ. ಹಿಮಾಚಲ ಪ್ರದೇಶದಲ್ಲಿ ಇವರು 3 ಬಾರಿ ಶಾಸಕರೂ ಆಗಿದ್ದರು. 2014 ರಲ್ಲಿ ಮೊದಲ ಬಾರಿಗೆ ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ದಕ್ಷಿಣ ಭಾರತದಲ್ಲಿ ಪಕ್ಷವನ್ನು ಬಲಪಡಿಸುವುದು ನಡ್ಡಾ ಅವರ ಪ್ರಮುಖ ಆದ್ಯತೆ ಎಂದು ಹೇಳಲಾಗಿದೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿಯ ಕಠಿಣ ಪೈಪೋಟಿಯ ಮಧ್ಯೆಯೂ ಬಿಜೆಪಿಗೆ 62 ಕ್ಷೇತ್ರಗಳಲ್ಲಿ ಗೆಲುವು ತಂದುಕೊಡುವಲ್ಲಿ ನಡ್ಡಾ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು.