ಬೆಂಗಳೂರು: ದೇಶದಲ್ಲಿ ಒಂದಲ್ಲ ಒಂದು ವಸ್ತುವಿನ ಬೆಲೆ ಆಗಾಗ ಏರಿಕೆ ಆಗುತ್ತಲೇ ಇದೆ. ಇತ್ತೀಚೆಗಂತೂ ಜನರಿಗೆ ಅಗತ್ಯವಿರುವ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಹಾಲು, ತರಕಾರಿ, ಬೇಳೆಕಾಳು, ಗ್ಯಾಸ್ ಸಿಲಿಂಡರ್, ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಇದೀಗ ಮಾಂಸಗಳ ಬೆಲೆ ಕೂಡ ಏರಿಕೆಯತ್ತ ಮುಖ ಮಾಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾಂಸ ಪ್ರಿಯರ ಚಿಕನ್ ದರ ಇದೀಗ ಗಗನಕ್ಕೇರಿದೆ. ಚಿಕನ್ ದರದ ಏರಿಕೆಯು ಮಾಂಸ ಪ್ರಿಯರನ್ನು ಕಂಗಾಲು ಮಾಡಿದೆ ಎನ್ನಬಹುದು.
ಶ್ರಾಮಣ ಮಾಸ ಬಂತೆಂದರೆ ಹಬ್ಬಗಳ ಸುರಿಮಳೆ ಇರುತ್ತದೆ ಅದೇ ರೀತಿ ಶಿವರಾತ್ರಿ ಸಮೀಪಿಸುತ್ತಿದ್ದರಿಂದ ಚಿಕನ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಚಿಕನ್ ಬೆಲೆ ಧಿಡೀರ್ ಆಗಿ ಏರಿಕೆಯಾಗುತ್ತಿದೆ. ತಾಪಮಾನ ಏರಿಕೆ ಹಿನ್ನೆಲೆ ಬಿಸಿಲ ತಾಪಕ್ಕೆ ಕೋಳಿ ಬೆಳವಣಿಗೆ ಕುಂಠಿತವಾಗುತ್ತಿದ್ದು, ಕೋಳಿಗಳ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿದೆ.
ಕೋಳಿಗಳು ಬಿಸಿಲಿನ ಧಗೆ ಹಾಗೂ ಸೆಕೆ ತಾಳಲಾರದೇ ಸಾವನ್ನಪ್ಪುತ್ತಿದೆ. ಹೀಗಾಗಿ ಕೋಳಿ ಮಾಂಸ ಉತ್ಪಾದನೆ ಕುಸಿದಿದ್ದು, ಚಿಕನ್ ದರ ಧಿಡೀರ್ ಏರಿಕೆಯಾಗಿದೆ. ಒಂದು ವಾರದ ಹಿಂದೆ 180 ರೂಪಾಯಿ ಇದ್ದ ಒಂದು ಕೆಜಿ ಕೋಳಿ ಮಾಂಸದ ಬೆಲೆ 250 ರೂಪಾಯಿಗೆ ತಲುಪಿದೆ. ಕೆಲವು ಕಡೆ 240 ರೂಗೆ ಮಾರಾಟವಾಗುತ್ತಿದೆ. ಈ ಮೂಲಕ ಚಿಕನ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ.