ಲೋಂಡಾ, ಜು.22 : ಕರಡಿಗಳೇ ತುಂಬಿರುವ ದಟ್ಟಾರಣ್ಯದ ಅಕ್ರಾಳಿ ಎನ್ನುವ ಗ್ರಾಮದ ಬಳಿ ರೈಲ್ವೆ ಹಳಿ ಪಕ್ಕದಲ್ಲಿ ಬಿದ್ದಿದ್ದ ಸುಮಾರು ಒಂದು ವರ್ಷದ ಹೆಣ್ಣು ಮಗುವೊಂದು ಪವಾಡ ರೀತಿಯಲ್ಲಿ ಬದುಕಿ ಬಂದಿದ್ದಾಳೆ.
ಪಶ್ಚಿಮ ಘಟ್ಟದಲ್ಲಿರುವ ಲೋಂಡಾ ನಿಲ್ದಾಣದಿಂದ 2.8 ಕಿ.ಮೀ. ದೂರದಲ್ಲಿ ಮಗು ಸಿಕ್ಕಿದೆ. ಚಲಿಸುತ್ತಿದ್ದ ರೈಲಿನಿಂದ ಮಗುವನ್ನು ಎಸೆದಿರಬಹುದು ಅಥವಾ ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಊಹಿಸಲಾಗಿದೆ. ರಾತ್ರಿ ಇಡೀ ಆ ಭಾಗದಲ್ಲಿ ವಿಪರೀತ ಮಳೆ ಸುರಿದಿದೆ. ಅಲ್ಲಿ ಕರಡಿಗಳ ಓಡಾಟವೂ ಹೆಚ್ಚಾಗಿದೆ. ಅಂಥ ಸ್ಥಿತಿಯಲ್ಲಿಯೂ ಮಗು ಜೀವಂತವಾಗಿ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆಶ್ಚರ್ಯ ಹುಟ್ಟಿಸಿದೆ.
ಬೆಳಗ್ಗೆ ರೈಲು ಹಳಿ ಪಕ್ಕದಲ್ಲಿ ಮಗುವಿನ ಅಳು ಕೇಳಿದ ಸ್ಥಳೀಯ ರೈತರೊಬ್ಬರು ವಿಷಯವನ್ನು ಅಕ್ರಾಳಿ ಗ್ರಾಮಸ್ಥರಿಗೆ ತಿಳಿಸಿದರು. ಬಳಿಕ ಸ್ಥಳೀಯರು ಮಗುವಿಗೆ ನೀರುಣಿಸಿ ಬಿಸ್ಕಿಟ್ ತಿನ್ನಿಸಿದ್ದಾರೆ. ನಿತ್ರಾಣ ಸ್ಥಿತಿಯಲ್ಲಿದ್ದ ಮಗು ಶನಿವಾರ ಮಧ್ಯ ರಾತ್ರಿಯೇ ರೈಲಿನಿಂದ ಬಿದ್ದಿರಬಹುದು ಎಂದು ಊಹಿಸಲಾಗಿದೆ. ಮಗು ಎರಡು ಪ್ಯಾಕ್ ಬಿಸ್ಕೀಟ್ಗಳನ್ನು ತಿಂದಿದೆ. ಬಳಿಕ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೊಬ್ಬರ ಸಹಾಯದಿಂದ ರೈಲ್ವೆ ಪೊಲೀಸರನ್ನು ಸಂಪರ್ಕಿಸಿ ಅವರಿಗೆ ಮಗು ಒಪ್ಪಿಸಿದ್ದಾರೆ.